SK Home Ad
Home ಸುದ್ದಿ ರಾಜ್ಯ ಜಿನೀವಾದಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದದಲ್ಲಿ ಅಕ್ಷಯಪಾತ್ರ ಫೌಂಡೇಶನ್ ಭಾಗಿ

ಜಿನೀವಾದಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದದಲ್ಲಿ ಅಕ್ಷಯಪಾತ್ರ ಫೌಂಡೇಶನ್ ಭಾಗಿ

0
5

ಜಿನೀವಾ: ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ಪಲೈಸ್ ಡೆ ನೇಷನ್ಸ್‌ನಲ್ಲಿ ನವೆಂಬರ್ 24ರಂದು ನಡೆದ ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದದಲ್ಲಿ ಅಕ್ಷಯಪಾತ್ರ ಫೌಂಡೇಶನ್ ಭಾಗವಹಿಸಿತು.

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಮಾನವ ಹಕ್ಕುಗಳ ವೇದಿಕೆಯ ಅಂಗವಾಗಿ ಆಯೋಜಿಸಲಾಗಿದ್ದ ‘ರೆಸ್ಪಾನ್ಸಿಬಿಲಿಟಿ ಬೈ ಡಿಸೈನ್: ಪ್ರಾಮಿಸಿಂಗ್ ಬಿಸಿನೆಸ್ ಪ್ರಾಕ್ಟೀಸಸ್’ (Responsibility by Design: Promising Business Practices) ಎಂಬ ವಿಷಯದ ಕುರಿತ ಪ್ಯಾನಲ್ ಚರ್ಚೆಯಲ್ಲಿ ಸಂಸ್ಥೆಯು ತನ್ನ ಅನುಭವಗಳನ್ನು ಹಂಚಿಕೊಂಡಿತು. ಅಭಿವೃದ್ಧಿಯ ಹಕ್ಕಿನ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಪ್ರೊ. ಸೂರ್ಯ ದೇವಾ ಅವರು ಈ ಸಂವಾದವನ್ನು ಆಯೋಜಿಸಿದ್ದರು.

ಸಂಸ್ಥೆಗಳು ತಮ್ಮ ಉದ್ಯಮ ಮಾದರಿ, ಆಡಳಿತ ವ್ಯವಸ್ಥೆ, ಪ್ರೋತ್ಸಾಹಕ ಕ್ರಮಗಳು ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದು ಚರ್ಚೆಯ ಪ್ರಮುಖ ವಿಷಯವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯಪಾತ್ರ ಫೌಂಡೇಶನ್‌ನ ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ ನೀರದ ದಾಸ್, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವುದು ಕೇವಲ ಆಹಾರ ವಿತರಣೆಯಲ್ಲ; ಅದು ಮಕ್ಕಳ ಬೆಳವಣಿಗೆ, ಪೌಷ್ಟಿಕಾಂಶದ ಭದ್ರತೆ ಹಾಗೂ ಸಾಮಾಜಿಕ ಸುರಕ್ಷತೆಯನ್ನು ಖಚಿತಪಡಿಸುವ ಮಹತ್ವದ ಸಾಮಾಜಿಕ ಮಧ್ಯಸ್ಥಿಕೆಯಾಗಿದೆ ಎಂದು ಹೇಳಿದರು.

ಕಳೆದ 26 ವರ್ಷಗಳಿಂದ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಕ್ಷಯಪಾತ್ರ ಫೌಂಡೇಶನ್ ಬಗ್ಗೆ ಹೆಮ್ಮೆ ಇದೆ. ಸಂಸ್ಥೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಯಶಸ್ವಿ ಮಾದರಿಯಾಗಿದ್ದು, ಲಾಭದ ಉದ್ದೇಶ ಹೊಂದಿರುವ ಮತ್ತು ಲಾಭರಹಿತ ವಲಯಗಳ ಪರಿಣತಿ ಹಾಗೂ ಸರ್ಕಾರದ ಸಹಕಾರದೊಂದಿಗೆ ಹಸಿವಿನ ಸಮಸ್ಯೆ ನಿವಾರಣೆಗೆ ಕಾರ್ಯನಿರ್ವಹಿಸುತ್ತಿದೆ. ಮಗುವಿಗೆ ನೀಡುವ ಪ್ರತಿಯೊಂದು ಊಟವೂ ಸುಸ್ಥಿರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ವಿವಿಧ ವಲಯಗಳಲ್ಲಿನ ಉತ್ತಮ ಉದ್ಯಮ ಮಾದರಿಗಳ ಕುರಿತು ಮಾತನಾಡಿದ ಅವರು, ಅನೇಕ ಕಂಪನಿಗಳು ಮಾನವೀಯ ಮತ್ತು ಪರಿಸರ ಸಂಬಂಧಿತ ಜವಾಬ್ದಾರಿಗಳನ್ನು ತಮ್ಮ ಉದ್ಯಮ ಮಾದರಿಗಳಲ್ಲಿ ಅಳವಡಿಸಿಕೊಂಡು ಲಾಭದಾಯಕವಾಗಿಯೂ ಕಾರ್ಯನಿರ್ವಹಿಸುತ್ತಿವೆ ಎಂದರು.

ಇಂತಹ ಯಶಸ್ವಿ ಮಾದರಿಗಳನ್ನು ಇತರ ಸಂಸ್ಥೆಗಳಿಗೂ ಪರಿಚಯಿಸುವ ಅಗತ್ಯವಿದೆ. ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯನ್ನು ಉದ್ಯಮದ ಭಾಗವಾಗಿಸಿಕೊಳ್ಳುವ ಕುರಿತು ಅರಿವು ಮೂಡಿಸಲು, ಯಶಸ್ವಿ ಪ್ರಯೋಗಗಳ ಅಧ್ಯಯನಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ನವೀನ ನೀರದ ದಾಸ್ ಹೇಳಿದರು.

ಜವಾಬ್ದಾರಿಯುತ ಉದ್ಯಮ ಪದ್ಧತಿಗಳನ್ನು ಉತ್ತೇಜಿಸುವುದು, ವಿವಿಧ ವಲಯಗಳ ನಡುವೆ ಪರಸ್ಪರ ಕಲಿಕೆಗೆ ಅವಕಾಶ ಕಲ್ಪಿಸುವುದು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉದ್ಯಮದ ಕಾರ್ಯತಂತ್ರದ ಭಾಗವಾಗಿಸುವ ಕುರಿತು ಈ ಸಂವಾದದಲ್ಲಿ ಒತ್ತು ನೀಡಲಾಯಿತು.