2013ರಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿ ಭಾರತೀಯ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದಾಗ, ವೈಭವ್ ಸೂರ್ಯವಂಶಿ ಇನ್ನೂ ಕೇವಲ 2 ವರ್ಷದ ಪುಟ್ಟ ಬಾಲಕ. ಆದರೆ 13 ವರ್ಷಗಳ ಬಳಿಕ ಅದೇ 52 ಎಸೆತಗಳಲ್ಲಿ ಕೊಹ್ಲಿಗಿಂತ ದುಪ್ಪಟ್ಟು ರನ್ ಅಂದರೆ ದ್ವಿಶತಕ (200 ರನ್) ಬಾರಿಸುವ ಮೂಲಕ 15 ವರ್ಷದ ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ದೋಹಾದಲ್ಲಿ ಮಂಗಳವಾರ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಒಟ್ಟು 53 ಎಸೆತಗಳಲ್ಲಿ 204 ರನ್ ಚಚ್ಚಿದ್ದು, ಇವುಗಳಲ್ಲಿ ಬರೋಬ್ಬರಿ 196 ರನ್ಗಳು ಕೇವಲ ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕವೇ (28 ಸಿಕ್ಸರ್, 7 ಬೌಂಡರಿ) ಬಂದಿರುವುದು ವಿಶೇಷ.
ವೈಭವ್ ನಿರ್ಮಿಸಿದ 4 ಬೃಹತ್ ಲಿಸ್ಟ್ – ಎ ವಿಶ್ವದಾಖಲೆಗಳು:
ಅತ್ಯಂತ ವೇಗದ ಶತಕ (28 ಎಸೆತ): ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ (29 ಎಸೆತ) ಅವರ ವಿಶ್ವದಾಖಲೆಯನ್ನು ಅಳಿಸಿಹಾಕಿದರು.
ಅತ್ಯಂತ ವೇಗದ 150 ರನ್ (40 ಎಸೆತ): 2025ರಲ್ಲಿ ತಾವೇ ನಿರ್ಮಿಸಿದ್ದ 59 ಎಸೆತಗಳ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡರು.
ಅತ್ಯಂತ ವೇಗದ ದ್ವಿಶತಕ (52 ಎಸೆತ): ನ್ಯೂಜಿಲೆಂಡ್ನ ಚಾಡ್ ಬೋವ್ಸ್ (103 ಎಸೆತ) ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಅರ್ಧದಷ್ಟು ಎಸೆತಗಳಲ್ಲೇ ಪುಡಿಗಟ್ಟಿದರು.
ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ (28 ಸಿಕ್ಸರ್): ಆಸ್ಟ್ರೇಲಿಯಾದ ಡಾರ್ಸಿ ಶಾರ್ಟ್ (23 ಸಿಕ್ಸರ್) ಅವರ ವಿಶ್ವದಾಖಲೆಯನ್ನು ಮುರಿದರು.
ಕೊಹ್ಲಿ ಶತಕ vs ವೈಭವ್ ದ್ವಿಶತಕ: ಸಿಕ್ಸರ್ಗಳ ಹೋಲಿಕೆ ಹೇಗಿದೆ?
ವಿರಾಟ್ ಕೊಹ್ಲಿ (2013, ಜೈಪುರ): ಆಸ್ಟ್ರೇಲಿಯಾ ವಿರುದ್ಧ 360 ರನ್ಗಳ ಬೃಹತ್ ಗುರಿ ಬೆನ್ನಟ್ಟುವಾಗ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 100* ರನ್ ಗಳಿಸಿದ್ದರು. ಆ ಇನಿಂಗ್ಸ್ನಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳಿದ್ದವು.
ವೈಭವ್ ಸೂರ್ಯವಂಶಿ (2026, ದೋಹಾ): ಯುಎಇ ವಿರುದ್ಧ 250 ರನ್ ಗುರಿ ಬೆನ್ನಟ್ಟುವಾಗ ವೈಭವ್ 52 ಎಸೆತಗಳಲ್ಲಿ 200 ರನ್ (ಒಟ್ಟು 53 ಎಸೆತಕ್ಕೆ 204 ರನ್) ಬಾರಿಸಿದರು. ಈ ಇನಿಂಗ್ಸ್ನಲ್ಲಿ ಕೊಹ್ಲಿಗಿಂತ 4 ಪಟ್ಟು ಹೆಚ್ಚು ಅಂದರೆ 28 ಸಿಕ್ಸರ್ ಹಾಗೂ 7 ಬೌಂಡರಿಗಳು ಸಿಡಿದಿದ್ದವು.
4 ವಿಶ್ವದಾಖಲೆ ಬರೆದರೂ ಕೊಹ್ಲಿಯ ಏಕದಿನ ದಾಖಲೆ ಮುರಿಯಲಾಗದಿರಲು ಕಾರಣವೇನು?
ಎಲ್ಲಾ ಅಂತರರಾಷ್ಟ್ರೀಯ ಏಕದಿನ (ODI) ಪಂದ್ಯಗಳು ‘ಲಿಸ್ಟ್-ಎ’ (List A) ಕ್ರಿಕೆಟ್ ವ್ಯಾಪ್ತಿಗೆ ಬರುತ್ತವೆ. ಆದರೆ, ಎಲ್ಲಾ ಲಿಸ್ಟ್-ಎ ಪಂದ್ಯಗಳಿಗೆ ಅಧಿಕೃತ ‘ಏಕದಿನ’ (ODI) ಮಾನ್ಯತೆ ಇರುವುದಿಲ್ಲ. ದೋಹಾದಲ್ಲಿ ನಡೆದ ಪಂದ್ಯವು ಭಾರತ ‘ಎ’ (India A) ಮತ್ತು ಯುಎಇ ನಡುವೆ ನಡೆದಿದ್ದರಿಂದ ಇದಕ್ಕೆ ಅಧಿಕೃತ ODI ಸ್ಥಾನಮಾನವಿರಲಿಲ್ಲ, ಬದಲಾಗಿ ಲಿಸ್ಟ್-ಎ ದರ್ಜೆ ಮಾತ್ರ ಇತ್ತು. ಹೀಗಾಗಿ ಭಾರತದ ಪರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ (52 ಎಸೆತ) ಬಾರಿಸಿದ ವಿರಾಟ್ ಕೊಹ್ಲಿ ಅವರ ದಾಖಲೆ ಈಗಲೂ ಅಬಾಧಿತವಾಗಿದೆ.





















