ಕನ್ನಡ ಚಿತ್ರರಂಗದ ಧೀಮಂತ ನಟ, ರಾಜಕಾರಣಿ ಹಾಗೂ ಅಭಿಮಾನಿಗಳ ಪ್ರೀತಿಯ ‘ರೆಬೆಲ್ ಸ್ಟಾರ್’ಅಂಬರೀಷ್ ಅವರ 8ನೇ ಪುಣ್ಯಸ್ಮರಣೆ ಇಂದು ಅವರು ನಮ್ಮನ್ನು ಅಗಲಿ ಎಂಟು ವರ್ಷಗಳು ಕಳೆದಿದ್ದರೂ, ಅವರ ವ್ಯಕ್ತಿತ್ವ, ನೇರ ನಡೆ-ನುಡಿ, ಸ್ನೇಹಪರತೆ ಹಾಗೂ ಸಿನಿಮಾಗಳ ಮೂಲಕ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ.
ಅಂಬರೀಷ್ ಎಂದರೆ ಕೇವಲ ಒಬ್ಬ ನಟನಲ್ಲ, ಕನ್ನಡಿಗರ ಪಾಲಿನ ಆತ್ಮೀಯ ವ್ಯಕ್ತಿತ್ವ. ತಮ್ಮ ವಿಶಿಷ್ಟ ಅಭಿನಯ, ಗಂಭೀರ ಧ್ವನಿ, ಖಡಕ್ ಸಂಭಾಷಣೆ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಸಂಪಾದಿಸಿದ್ದರು. ತೆರೆಯ ಮೇಲೆ ಬಂಡಾಯದ ನಾಯಕನಾಗಿ ಕಾಣಿಸಿಕೊಂಡ ಅವರು ನಿಜ ಜೀವನದಲ್ಲಿಯೂ ತಮ್ಮ ನೇರ ಮಾತು ಮತ್ತು ಸ್ನೇಹಪರ ಸ್ವಭಾವದಿಂದ ಗುರುತಿಸಿಕೊಂಡಿದ್ದರು.
1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಜನಿಸಿದ ಅಂಬರೀಷ್, 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಿನಿ ಪಯಣದಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ‘ಅಂತ’, ‘ಚಕ್ರವ್ಯೂಹ’, ‘ಮಸಣದ ಹೂವು’, ‘ಪಡುವಾರಹಳ್ಳಿ ಪಾಂಡವರು’ ಸೇರಿದಂತೆ ಹಲವು ಚಿತ್ರಗಳು ಅವರ ಅಭಿನಯಕ್ಕೆ ಸಾಕ್ಷಿಯಾಗಿವೆ.
ಚಿತ್ರರಂಗದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಂಬರೀಷ್ ತಮ್ಮದೇ ಆದ ಛಾಪು ಮೂಡಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸಚಿವರಾಗಿ ಹಾಗೂ ಕರ್ನಾಟಕ ಸರ್ಕಾರದಲ್ಲಿ ವಸತಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
2018ರ ನವೆಂಬರ್ 24ರಂದು ಬೆಂಗಳೂರಿನಲ್ಲಿ ಅವರು ನಿಧನರಾದರು. ಪತ್ನಿ ಸುಮಲತಾ ಅಂಬರೀಷ್ ಮತ್ತು ಪುತ್ರ ಅಭಿಷೇಕ್ ಅವರನ್ನು ಅಗಲಿದ್ದಾರೆ.
ಇಂದು ಅವರ 8ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಪತ್ನಿ ಸುಮಲತಾ ಅಂಬರೀಷ್ ಮತ್ತು ಪುತ್ರ ಅಭಿಷೇಕ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದರು. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ರೆಬೆಲ್ ಸ್ಟಾರ್ನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಕಾಲ ಬದಲಾದರೂ ಅಂಬರೀಷ್ ಅವರ ಸಿನಿಮಾಗಳು, ಸ್ನೇಹಕ್ಕೆ ನೀಡುತ್ತಿದ್ದ ಗೌರವ ಮತ್ತು ಕನ್ನಡಿಗರೊಂದಿಗಿನ ಆತ್ಮೀಯ ಬಾಂಧವ್ಯ ಎಂದೆಂದಿಗೂ ಸ್ಮರಣೀಯ.
ಅಂಬರೀಷ್ ನಮ್ಮೊಂದಿಗಿಲ್ಲ, ಆದರೆ ಅವರ ನೆನಪುಗಳು ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರ.






















