SK Home Ad
Home ಕ್ರೀಡೆ “ನಾನು ಹೆಚ್ಚು ಮಾತನಾಡಬೇಕಿಲ್ಲ, ನನ್ನ ಬ್ಯಾಟ್ ಉತ್ತರ ಕೊಟ್ಟಿದೆ”: ಟೀಮ್ ಇಂಡಿಯಾದಿಂದ ಕೈಬಿಟ್ಟಿದ್ದಕ್ಕೆ ತಿರುಗೇಟು ನೀಡಿದ...

“ನಾನು ಹೆಚ್ಚು ಮಾತನಾಡಬೇಕಿಲ್ಲ, ನನ್ನ ಬ್ಯಾಟ್ ಉತ್ತರ ಕೊಟ್ಟಿದೆ”: ಟೀಮ್ ಇಂಡಿಯಾದಿಂದ ಕೈಬಿಟ್ಟಿದ್ದಕ್ಕೆ ತಿರುಗೇಟು ನೀಡಿದ ಶ್ರೇಯಾಂಕಾ

0
26

ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆ ಹಾಗೂ ಇತ್ತೀಚೆಗೆ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಿಗೆ ಭಾರತ ತಂಡದಿಂದ ಕೈಬಿಟ್ಟಿದ್ದರಿಂದ ತೀವ್ರ ನಿರಾಸೆಗೊಳಗಾಗಿದ್ದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್, ತಮ್ಮ ಬ್ಯಾಟ್ ಮತ್ತು ಬೌಲಿಂಗ್ ಮೂಲಕವೇ ಆಯ್ಕೆಗಾರರಿಗೆ ಖಡಕ್ ಉತ್ತರ ನೀಡಿದ್ದಾರೆ.

ಸೀನಿಯರ್ ಮಹಿಳಾ ಟಿ20 ಟ್ರೋಫಿ 2026ರಲ್ಲಿ ಕರ್ನಾಟಕ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ 23 ವರ್ಷದ ಶ್ರೇಯಾಂಕಾ, ‘ಸರಣಿ ಶ್ರೇಷ್ಠ’  ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಮಾಧ್ಯಮ ಒಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ನೋವು ಮತ್ತು ಕಮ್‌ಬ್ಯಾಕ್ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿರುವ ಶ್ರೇಯಾಂಕಾ, “ನಾನು ಹೆಚ್ಚು ಮಾತನಾಡುವ ಅಗತ್ಯವಿಲ್ಲ, ನನ್ನ ಬ್ಯಾಟ್ ಈಗಾಗಲೇ ಮಾತನಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕವೂ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗದಿದ್ದಾಗ ನನ್ನ ಹೃದಯ ಒಡೆದುಹೋಗಿತ್ತು. ಆದರೆ ಆಯ್ಕೆ ಬಗ್ಗೆ ಚಿಂತಿಸುವ ಬದಲು ನನ್ನ ಆಟವನ್ನು ಸುಧಾರಿಸಿಕೊಳ್ಳಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ಬೌಲಿಂಗ್‌ನಲ್ಲಿ ದಾಖಲೆ, ಬ್ಯಾಟಿಂಗ್‌ನಲ್ಲಿ ‘ಪುನರ್ಜನ್ಮ’: ಟೂರ್ನಿಯಲ್ಲಿ ಬರೋಬ್ಬರಿ 22 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಇತಿಹಾಸ ನಿರ್ಮಿಸಿದ ಶ್ರೇಯಾಂಕಾ, ಬ್ಯಾಟಿಂಗ್‌ನಲ್ಲೂ ಅಕ್ಷರಶಃ ಅಬ್ಬರಿಸಿದ್ದಾರೆ.

197.43ರ ಸ್ಟ್ರೈಕ್ ರೇಟ್‌ನಲ್ಲಿ 154 ರನ್ ಸಿಡಿಸಿರುವ ಅವರು, ದೆಹಲಿ ವಿರುದ್ಧ ಕೇವಲ 29 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 71 ರನ್* ಬಾರಿಸಿ ತಮ್ಮ ಚೊಚ್ಚಲ ಟಿ20 ಅರ್ಧಶತಕ ಪೂರೈಸಿದರು. ಫೈನಲ್‌ನಲ್ಲಿ ರೈಲ್ವೇಸ್ ಮಣಿಸಿ ಕರ್ನಾಟಕ ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಕಳೆದ ಕೆಲವು ತಿಂಗಳ ನೋವು ಕರಗಿ ಶ್ರೇಯಾಂಕಾ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಅಭಿಮಾನಿಗಳನ್ನು ಭಾವುಕರನ್ನಾಗಿಸಿತ್ತು.

ಮುಂದಿನ ಗುರಿ ಟೀಮ್ ಇಂಡಿಯಾ ಜೆರ್ಸಿ: ಕೋಚ್ ಅರ್ಜುನ್ ದೇವ್ ಮಾರ್ಗದರ್ಶನದಲ್ಲಿ ಕಳೆದ ಐದು ವರ್ಷಗಳಿಂದ ತಮ್ಮ ಬ್ಯಾಟಿಂಗ್ ಸ್ವಿಂಗ್ ಮತ್ತು ಹೊಡೆತಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ಶ್ರೇಯಾಂಕಾ, ಕೇವಲ ಸ್ವೀಪ್-ರಿವರ್ಸ್ ಸ್ವೀಪ್‌ಗೆ ಸೀಮಿತವಾಗದೆ ಮೈದಾನದ ಎಲ್ಲಾ ಮೂಲೆಗೂ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ.

ಇದೀಗ ಮುಂಬರುವ ಇಂಗ್ಲೆಂಡ್ ‘ಎ’ ವಿರುದ್ಧದ ಎಲ್ಲಾ ಮಾದರಿಯ ಸರಣಿಗೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಾಂಕಾ, ಅಲ್ಲಿಯೂ ಮಿಂಚುವ ಮೂಲಕ ಮತ್ತೆ ಭಾರತ ಸೀನಿಯರ್ ತಂಡದ ಜೆರ್ಸಿ ತೊಡುವ ದೃಢ ವಿಶ್ವಾಸದಲ್ಲಿದ್ದಾರೆ.