SK Home Ad
Home ಕ್ರೀಡೆ  ಕೈಗೆ ಬಂದ ತುತ್ತು ಟೀಂ ಇಂಡಿಯಾ  ಬಾಯಿಗೆ ಬರಲಿಲ್ಲ; ಮೊದಲ ಟೆಸ್ಟ್‌ ರೋಚಕ್‌ ಡ್ರಾನಲ್ಲಿ ಅಂತ್ಯ

 ಕೈಗೆ ಬಂದ ತುತ್ತು ಟೀಂ ಇಂಡಿಯಾ  ಬಾಯಿಗೆ ಬರಲಿಲ್ಲ; ಮೊದಲ ಟೆಸ್ಟ್‌ ರೋಚಕ್‌ ಡ್ರಾನಲ್ಲಿ ಅಂತ್ಯ

0
9

ವೆಲ್ಲಿಂಗ್ಟನ್ : ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿ ನಿರಾಸೆ ಮೂಡಿಸಿದೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಪಂದ್ಯದ ಕೊನೆಯ ದಿನ ಭಾರತ ಗೆಲುವಿಗೆ ಎಂಟು ವಿಕೆಟ್‌ಗಳ ಅಗತ್ಯವಿತ್ತು. ಆದರೆ ನ್ಯೂಜಿಲೆಂಡ್ ಬ್ಯಾಟರ್‌ಗಳ ಸಂಘಟಿತ ಹೋರಾಟದಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಡ್ಯಾರಿಲ್ ಮಿಚೆಲ್ 49 ರನ್ ಹಾಗೂ ಗ್ಲೆನ್ ಫಿಲಿಪ್ಸ್ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಜೋಡಿ 43 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿತು.

ಇದಕ್ಕೂ ಮುನ್ನ ಭಾರತ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕೆ.ಎಲ್. ರಾಹುಲ್ 136 ಹಾಗೂ ರಿಷಭ್ ಪಂತ್ 128 ರನ್ ಗಳಿಸಿ ಶತಕ ಸಿಡಿಸಿದ್ದರು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 368 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 120 ಓವರ್‌ಗಳಲ್ಲಿ 5 ವಿಕೆಟ್‌ಗೆ 239 ರನ್ ಗಳಿಸಿತು.

ಭಾರತದ ದಾಖಲೆಯ ರನ್‌  ರಾಶಿ

ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್‌ ಬೌಲರ್‌ಗಳನ್ನು ಬೆಂಡೆತ್ತಿದ ಭಾರತ, ವಿದೇಶಿ ನೆಲದಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ ಟೆಸ್ಟ್‌ ಮೊತ್ತವನ್ನು (720/9 ಡಿಕ್ಲೇರ್‌) ಕಲೆಹಾಕಿತು. ಕನ್ನಡಿಗ ಕೆ.ಎಲ್‌. ರಾಹುಲ್‌ (136) ಅವರ ತಾಳ್ಮೆಯ ಶತಕ ಹಾಗೂ ರಿಷಭ್‌ ಪಂತ್‌ (128) ಅವರ ಸ್ಫೋಟಕ ಶತಕ ಭಾರತಕ್ಕೆ 352 ರನ್‌ಗಳ ಬೃಹತ್‌ ಮುನ್ನಡೆ ತಂದುಕೊಟ್ಟಿತು.

ಈ ಡ್ರಾದಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತದ ಸ್ಥಾನಕ್ಕೆ ಹಿನ್ನಡೆಯಾಗಿದೆ. ಭಾರತ ಶೇ.50 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 27ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌ ಕಾರ್ಡ್‌

ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌: 368 ರನ್‌
ಭಾರತ ಮೊದಲ ಇನಿಂಗ್ಸ್‌: 720/9 ಡಿಕ್ಲೇರ್‌
ನ್ಯೂಜಿಲೆಂಡ್‌ ದ್ವಿತೀಯ ಇನಿಂಗ್ಸ್‌: 239/5