ಚಿಕ್ಕಮಗಳೂರು: ಶಿಕಾರಿಗೆ ಬಂದವರಂತೆ ನಟಿಸಿ ಬಂದ ದುಷ್ಕರ್ಮಿಗಳ ತಂಡವೊಂದು ಎಸ್ಟೇಟ್ ಮಾಲೀಕರ ಮನೆಯ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಮಾಲೀಕ ವಿಂದನ್ ಅವರ ಮನೆ ಗುರಿಯಾಗಿಸಿಕೊಂಡು 5ರಿಂದ 6 ಮಂದಿ ದುಷ್ಕರ್ಮಿಗಳ ತಂಡ ಈ ದಾಳಿ ನಡೆಸಿದೆ ಎನ್ನಲಾಗಿದೆ. ಶಿಕಾರಿಗೆ ಬಂದವರಂತೆ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಮನೆಯತ್ತ ಮೂರು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯ ತೀವ್ರತೆಗೆ ಮನೆಯ ಕಿಟಕಿ ಹಾಗೂ ಗೋಡೆಗಳು ಛಿದ್ರಗೊಂಡಿವೆ. ಈ ವೇಳೆ ಮನೆಯೊಳಗಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದುಷ್ಕರ್ಮಿಗಳು ಬಂದೂಕುಗಳೊಂದಿಗೆ ಮನೆಯ ಬಳಿ ಬರುತ್ತಿದ್ದಂತೆ ಮನೆಯ ಸಿಸಿ ಕ್ಯಾಮೆರಾ ವ್ಯವಸ್ಥೆಯಲ್ಲಿ ಅಲರ್ಟ್ ಸಿಗ್ನಲ್ ಬಂದಿದ್ದು, ಗುಂಡಿನ ದಾಳಿ ನಡೆಸಿದವರ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಆರೋಪಿಗಳ ಗುರುತು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ದೃಶ್ಯಗಳು ಪೊಲೀಸರಿಗೆ ಮಹತ್ವದ ಸುಳಿವಾಗುವ ಸಾಧ್ಯತೆಯಿದೆ.
ದಾಳಿಯ ಹಿಂದೆ ಹಳೆಯ ವೈಷಮ್ಯವೇ ಕಾರಣ ಎಂದು ಮನೆ ಮಾಲೀಕ ವಿಂದನ್ ಆರೋಪಿಸಿದ್ದಾರೆ. ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದಾಳಿಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನೆ ಮಾಲೀಕರು ಒತ್ತಾಯಿಸಿದ್ದಾರೆ.





















