SK Home Ad
Home ಕ್ರೀಡೆ ನೇಪಾಳಕ್ಕೆ 26 ರನ್‌ಗಳಲ್ಲೇ ಆಟ ಮುಗಿಸಿದ ಭಾರತ ಎ ಬೌಲರ್ಸ್

ನೇಪಾಳಕ್ಕೆ 26 ರನ್‌ಗಳಲ್ಲೇ ಆಟ ಮುಗಿಸಿದ ಭಾರತ ಎ ಬೌಲರ್ಸ್

0
35

ದೋಹಾ: ಎಸಿಸಿ ಮೆನ್ಸ್ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಭಾರತ ಎ ತಂಡ ಭರ್ಜರಿ 306 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 332 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ನೇಪಾಳ ತಂಡ ಕೇವಲ 11.3 ಓವರ್‌ಗಳಲ್ಲಿ 26 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕುಮಾರ್ ಕುಶಾಗ್ರ ಹಾಗೂ ತಿಲಕ್ ವರ್ಮಾ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಕುಶಾಗ್ರ 102 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 117 ರನ್ ಗಳಿಸಿದರೆ, ತಿಲಕ್ ವರ್ಮಾ 113 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 107 ರನ್ ಸಿಡಿಸಿದರು.

ಇನ್ನು ಸೂರ್ಯಾಂಶ್ ಶೆಡ್ಗೆ ಕೇವಲ 14 ಎಸೆತಗಳಲ್ಲಿ 36 ರನ್ ಗಳಿಸಿ ಅಬ್ಬರಿಸಿದರು. ವೈಭವ್ ಸೂರ್ಯವಂಶಿ 26 ರನ್ ಗಳಿಸಿದರು. ಉಳಿದಂತೆ ರಿಂಕು ಸಿಂಗ್, ಅಭಿಷೇಕ್ ಶರ್ಮಾ ತಲಾ 9 ರನ್ ಗಳಿಸಿದರು.

ಬೌಲರ್‌ಗಳ ದಾಳಿಗೆ ನೇಪಾಳ ತತ್ತರ: ಭಾರತ ನೀಡಿದ 333 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನೇಪಾಳ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಂಪೂರ್ಣವಾಗಿ ಕುಸಿದರು. ತಂಡದ ಪರ ಪವನ್ ಸರಾಫ್ ಹಾಗೂ ರಶೀದ್ ಖಾನ್ ತಲಾ 6 ರನ್ ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಸ್ಕೋರ್. ಯಾವೊಬ್ಬ ಬ್ಯಾಟರ್‌ ಕೂಡ ಎರಡಂಕಿ ಮೊತ್ತವನ್ನೂ ತಲುಪಲಿಲ್ಲ.

ಭಾರತದ ಪರ ಪ್ರಿನ್ಸ್ ಯಾದವ್ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿ ನೇಪಾಳದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹರ್ಷಿತ್ ರಾಣಾ 16 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಶಹಬಾಜ್ ಅಹ್ಮದ್ ಒಂದು ವಿಕೆಟ್ ಪಡೆದರು.