ಜಾಮ್‌ನಗರ: ಹುಟ್ಟಿದ ಕ್ಷಣದಿಂದಲೇ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಏಳು ವಾರಗಳ ಪುಟ್ಟ ಏಷ್ಯನ್ ಆನೆ ಮರಿ ʻರಾಜʼನಿಗೆ ಹೊಸ ಬದುಕು ನೀಡಲು ವನತಾರಾ ಇದೀಗ ಮಿಡಿದಿದೆ. ಅಸ್ಸಾಂನ ಪೊಹುಮಾರಾದಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ʻವನತಾರಾʼ ಆನೆಗಳ ಆಸ್ಪತ್ರೆಗೆ ಈ ಪುಟ್ಟ ಜೀವವನ್ನು ವಿಶೇಷ ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಗುತ್ತಿದೆ.
ಕಳೆದ ಏಳು ವಾರಗಳಿಂದ ವನತಾರಾದ ಪಶುವೈದ್ಯರು ರಾಜನ ಮಾಲೀಕರ ಮನೆಯಲ್ಲೇ ಹಗಲಿರುಳು ಶ್ರಮಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಪುಟ್ಟ ದೇಹಕ್ಕೆ ಎದುರಾಗಿರುವ ಸಂಕಷ್ಟಗಳು ಹೆಚ್ಚಾಗಿದ್ದು, ಸುಸಜ್ಜಿತ ಆಸ್ಪತ್ರೆಯ ತೀವ್ರ ನಿಗಾ ಘಟಕವೇ ಈಗಿರುವ ಏಕೈಕ ಭರವಸೆಯಾಗಿದೆ. ಇಷ್ಟು ಎಳೆಯ ಹಾಗೂ ನಿತ್ರಾಣಗೊಂಡಿರುವ ಮರಿಯನ್ನು ರಸ್ತೆಯ ಮೂಲಕ 2,500 ಕಿ.ಮೀ.ಗೂ ಹೆಚ್ಚು ದೂರ ಕರೆತಂದರೆ ಅದು ತಾಳಲಾರದು ಎಂಬ ಕಾರಣಕ್ಕೆ, ಆಕಾಶಮಾರ್ಗದ ಮೂಲಕ ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ಕರೆತರಲಾಗುತ್ತಿದೆ. ವನತಾರಾ ಸಂಸ್ಥಾಪಕ ಅನಂತ್ ಅಂಬಾನಿ ಅವರ ಪ್ರಾಣಿಪ್ರೇಮ ಮತ್ತು ಕಾಳಜಿಯಿಂದಾಗಿ ಭಾರತದಲ್ಲಿ ನಡೆಯುತ್ತಿರುವ ಇಂತಹ ಮೂರನೇ ಭಾವನಾತ್ಮಕ ರಕ್ಷಣಾ ಕಾರ್ಯಾಚರಣೆ ಇದಾಗಿದೆ.
ರಾಜ ಮುರಿದ ಕಾಲಿನೊಂದಿಗೆ ಈ ಲೋಕಕ್ಕೆ ಕಾಲಿಟ್ಟಿರಬಹುದು, ಆದರೆ ಅವನ ಆತ್ಮಸ್ಥೈರ್ಯ ಎಂದಿಗೂ ಮುರಿದಿಲ್ಲ. ಕಳೆದ ಏಳು ವಾರಗಳಿಂದ ತನ್ನ ಪುಟ್ಟ ದೇಹಕ್ಕಿಂತಲೂ ದೊಡ್ಡದಾದ ಧೈರ್ಯದಿಂದ ಅವನು ಬದುಕಿಗಾಗಿ ಹೋರಾಡಿದ್ದಾನೆ. ಇಷ್ಟು ದಿನ ಅವನು ನೋವಿನೊಂದಿಗೆ ಸೆಣಸಾಡಿದ, ಈಗ ಅವನನ್ನು ನಮ್ಮ ಕೈಯಲ್ಲಿ ಹೊತ್ತು ಸಾಗುವ ಸರದಿ ನಮ್ಮದು. ಅನಂತ್ ಅಂಬಾನಿ ಅವರ ಸಹೃದಯತೆಯಿಂದಾಗಿ ರಸ್ತೆಯಲ್ಲಿ ದಿನಗಟ್ಟಲೆ ಹಿಡಿಯುತ್ತಿದ್ದ ನರಕಯಾತನೆಯ ಪ್ರಯಾಣ ಈಗ ಕೇವಲ ನಾಲ್ಕು ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ವನತಾರಾದಲ್ಲಿ ಅವನು ಎದ್ದು ನಿಲ್ಲಲು, ತೊದಲು ಹೆಜ್ಜೆ ಹಾಕಲು ಮತ್ತು ಮುಂದೊಂದು ದಿನ ಖುಷಿಯಿಂದ ಓಡಾಡಲು ನಾವು ನಮ್ಮ ಸರ್ವಸ್ವವನ್ನೂ ಧಾರೆ ಎರೆಯುತ್ತೇವೆ ಎಂದು ವನತಾರಾ ಸಿಇಒ ವಿವಾನ್ ಕರಾಣಿ ಅವರು ವಿವರಿಸಿದ್ದಾರೆ.
ಆನೆ ಮರಿಗೆ ಹುಟ್ಟಿದ ದಿನವೇ ಕಾದಿತ್ತು ಆಘಾತ: ಅದು ಅಕ್ಟೋಬರ್ 2, 2026. ಅಸ್ಸಾಂನ ಗೋಗಾಮುಖ್‌ನಲ್ಲಿ ಆನೆ ಮರಿ ರಾಜ ಜನಿಸಿದ ಸಂಭ್ರಮ ಕ್ಷಣಾರ್ಧದಲ್ಲಿಯೇ ಪರಿಸ್ಥಿತಿ ಆತಂಕಕ್ಕೆ ತಿರುಗಿತ್ತು. ರಾಜನ ತಾಯಿಗೆ ಕೇವಲ 11 ವರ್ಷ ವಯಸ್ಸು; ಮೊದಲ ಹೆರಿಗೆಯ ನೋವು ಮತ್ತು ಗಾಬರಿಯಲ್ಲಿ ಆ ತಾಯಿ ಆನೆ ತನ್ನ ನವಜಾತ ಕಂದನನ್ನೇ ಒದ್ದುಬಿಟ್ಟಿತ್ತು. ಕಣ್ಣು ಬಿಟ್ಟು ಜಗತ್ತನ್ನು ನೋಡುವ ಮೊದಲೇ ರಾಜನ ಬಲ ಹಿಂಗಾಲಿನ ದೊಡ್ಡ ತೊಡೆ ಮೂಳೆ (ಫೀಮರ್) ಸಂಪೂರ್ಣವಾಗಿ ಮುರಿದುಹೋಗಿತ್ತು.
ತಾಯಿಯ ಮಮತೆಯ ನೆರಳಲ್ಲಿ ತೊದಲು ಹೆಜ್ಜೆ ಇಡಬೇಕಿದ್ದ ಪುಟ್ಟ ಕಂದಮ್ಮ, ನೋವಿನಿಂದ ನೆಲದ ಮೇಲೆಯೇ ಕುಸಿದುಬಿತ್ತು. ಅಷ್ಟೇ ಅಲ್ಲ, ನವಜಾತ ಮರಿಗೆ ಅಮೃತದಂತಿರುವ ತಾಯಿಯ ಮೊದಲ ಹಾಲು (ಕೊಲೊಸ್ಟ್ರಮ್) ಕೂಡ ಅವನಿಗೆ ಸಿಗದೆ, ಹುಟ್ಟಿದ ದಿನದಿಂದಲೇ ಅನಾಥನಂತೆ ನೋವು ಅನುಭವಿಸಬೇಕಾಯಿತು.
ಮನೆಯಲ್ಲೇ ಏಳು ವಾರಗಳ ತಾಯಿಯಂತಹ ಆರೈಕೆ: ಪುಟ್ಟ ಕಂದನ ನರಳಾಟ ಕಂಡ ಮಾಲೀಕರು ವನತಾರಾದ ಮೊರೆ ಹೋದರು. ಅಕ್ಟೋಬರ್ 8ರಂದು ದೇವದೂತರಂತೆ ಬಂದ ವನತಾರಾದ ಕ್ಷಿಪ್ರ ಸ್ಪಂದನಾ ತಂಡ, ಎಕ್ಸ್-ರೇ ಮೂಲಕ ಮೂಳೆಯ ಮುರಿದ ತುದಿಗಳು ಒಂದರ ಮೇಲೊಂದು ಸರಿದಿರುವುದನ್ನು ಪತ್ತೆಹಚ್ಚಿತು. ತಕ್ಷಣವೇ ಕಾಲಿಗೆ ಪ್ಲಾಸ್ಟರ್ ಹಾಕಿ, ಮರಿ ನಿಲ್ಲಲು ʻಸ್ಲಿಂಗ್ʼ ಆಸರೆ ನೀಡಲಾಯಿತು. ತಾಯಿಯ ಹಾಲಿನ ಬದಲಿಗೆ ವಿಶೇಷ ಪೌಷ್ಟಿಕ ಹಾಲನ್ನು ಬಾಟಲಿಯ ಮೂಲಕ ಉಣಿಸುತ್ತಾ, ದಿನದ 24 ಗಂಟೆಯೂ ಕಣ್ಣಲ್ಲಿ ಕಣ್ಣಿಟ್ಟು ಕಾಯಲಾಯಿತು. ಕಾಲಿಗೆ ಭಾರ ಬೀಳದಂತೆ ವ್ಯಾಯಾಮ ಮಾಡಿಸಲು ವಿಶೇಷ ʻಹೈಡ್ರೋಥೆರಪಿʼ ವ್ಯವಸ್ಥೆಯನ್ನು ನಿರ್ಮಿಸಿ, ವನತಾರಾ ತಂಡ ರಾಜನಿಗೆ ತಾಯಿಯ ಸ್ಥಾನದಲ್ಲಿ ನಿಂತು ಆರೈಕೆ ಮಾಡಲಾಯಿತು.
ತಾಯಿಯ ಹಾಲಿನ ಕೊರತೆ ಮತ್ತು ಒಂದೇ ಕಡೆ ಮಲಗಿದ್ದರಿಂದ ರಾಜನ ಪುಟ್ಟ ದೇಹಕ್ಕೆ ಒಂದರ ಹಿಂದೆ ಒಂದರಂತೆ ಕಾಯಿಲೆಗಳು ಅಂಟಿಕೊಂಡವು. ಅತಿಸಾರ, ʻಕ್ಲೆಬ್ಸಿಯೆಲ್ಲಾ ನ್ಯುಮೋನಿಯಾʼ ಬ್ಯಾಕ್ಟೀರಿಯಾ ಸೋಂಕು, ರಕ್ತದಲ್ಲಿ ಸಕ್ಕರೆ ಅಂಶ ಕುಸಿತ ಮತ್ತು ಲಿವರ್ ಸಮಸ್ಯೆ ಕಾಣಿಸಿಕೊಂಡಿತು. ದೀರ್ಘಕಾಲ ಒಂದೇ ಮಗ್ಗುಲಲ್ಲಿ ಮಲಗಿದ್ದರಿಂದ ಪುಟ್ಟ ತಲೆಯ ಮೇಲೆ ಹುಣ್ಣುಗಳಾಗಿವೆ; ಜೊತೆಗೆ ಹೊಕ್ಕುಳಿನ ಹರ್ನಿಯಾ ಕೂಡ ಕಾಡುತ್ತಿದೆ. ವೈದ್ಯರು ಹಗಲಿರುಳು ಔಷಧ, ಗ್ಲೂಕೋಸ್ ನೀಡಿ ಉಳಿಸಿಕೊಂಡಿದ್ದರೂ, ಈಗ ಪುಟಾಣಿ ಆನೆಗೆ ಸುಸಜ್ಜಿತ ಆಸ್ಪತ್ರೆಯ ಚಿಕಿತ್ಸೆ ಅನಿವಾರ್ಯವಾಗಿದೆ.
ಆಕಾಶಮಾರ್ಗದಲ್ಲಿ ಪುಟ್ಟ ರಾಜನ ಪಯಣ: ನವೆಂಬರ್ 20ರಂದು ಗುವಾಹಟಿಯಿಂದ ಜಾಮ್‌ನಗರಕ್ಕೆ ನಾಲ್ಕು ಗಂಟೆಗಳ ವಿಶೇಷ ವಿಮಾನದಲ್ಲಿ ರಾಜ ಪ್ರಯಾಣ ಬೆಳೆಸಿದ್ದಾನೆ. ಅವನ ಪುಟ್ಟ ದೇಹಕ್ಕೆ ನೋವಾಗದಂತೆ, ತಲೆಯ ಹುಣ್ಣುಗಳಿಗೆ ಒತ್ತಡ ಬೀಳದಂತೆ ಮೃದುವಾದ ಹಾಸಿಗೆಯಿರುವ ವಿಶೇಷ ಕ್ರೇಟ್‌ನಲ್ಲಿ ಅವನನ್ನು ಇರಿಸಲಾಗಿದೆ. ಇಡೀ ಪ್ರಯಾಣದುದ್ದಕ್ಕೂ ವನತಾರಾದ ವೈದ್ಯರು ಅವನ ಕೈಹಿಡಿದು, ಹೃದಯ ಬಡಿತ, ಉಸಿರಾಟವನ್ನು ಗಮನಿಸುತ್ತಾ, ಹಾಲು ಮತ್ತು ಔಷಧ ನೀಡುತ್ತಾ ಜೊತೆಯಲ್ಲೇ ಸಾಗಿದ್ದಾರೆ. ಜಾಮ್‌ನಗರದ ವನತಾರಾ ಆಸ್ಪತ್ರೆಗೆ ತಲುಪಿದ ತಕ್ಷಣ ರಾಜನಿಗೆ ಸಮಗ್ರ ಚಿಕಿತ್ಸೆ ಆರಂಭವಾಗಲಿದೆ. ಗಾಯದ ತೀವ್ರತೆ ಹೆಚ್ಚಿರುವುದರಿಂದ ಅವನಿಗೆ ದೀರ್ಘಾವಧಿಯ ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪುಟ್ಟ ʻರಾಜʼನ ಬದುಕಿನುದ್ದಕ್ಕೂ ಅವನಿಗೆ ನೆರಳಾಗಿ ನಿಂತು, ನೋವು ಮರೆಸಿ, ಅವನನ್ನು ಕಾಪಾಡಲು ವನತಾರಾ ಸಂಕಲ್ಪ ಮಾಡಿದೆ.





















