SK Home Ad
Home ಸಿನಿ ಮಿಲ್ಸ್ ಕಿರುತೆರೆಗೆ ಅಲ್ಪವಿರಾಮ: ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ; ‘ಸಮುದ್ರ ಮಂಥನ’ದ ನಾಯಕನಾಗಿ ಎಂಟ್ರಿ!

ಕಿರುತೆರೆಗೆ ಅಲ್ಪವಿರಾಮ: ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ; ‘ಸಮುದ್ರ ಮಂಥನ’ದ ನಾಯಕನಾಗಿ ಎಂಟ್ರಿ!

0
9

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಎರಡೆರಡು ಯಶಸ್ವಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದ ಅವರು, ಬಹುನಿರೀಕ್ಷಿತ ‘ಸಮುದ್ರ ಮಂಥನ’ ಚಿತ್ರದ ಮೂಲಕ ಬೆಳ್ಳಿತೆರೆಯ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಮ್ಮ ಈ ನಿರ್ಧಾರದ ಕುರಿತು ಮಾತನಾಡಿರುವ ಯಶ್ವಂತ್, “ನಾನು ನಾಯಕನಾಗಿ ನಟಿಸಿರುವ ‘ಸಮುದ್ರ ಮಂಥನ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ನಟನೆಯ ಜೊತೆಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ, ಚಿತ್ರದ ಕೆಲಸಗಳಿಗೆ ನನ್ನ ಸಂಪೂರ್ಣ ಸಮಯದ ಅಗತ್ಯವಿತ್ತು. ಹೀಗಾಗಿ ನಾನಾಗಿಯೇ ‘ನಂದಗೋಕುಲ’ ಧಾರಾವಾಹಿಯಿಂದ ಹೊರಬಂದೆ. ಮತ್ತೊಂದೆಡೆ ‘ಅಮೃತಧಾರೆ’ ಧಾರಾವಾಹಿ ಕೂಡ ಮುಕ್ತಾಯದ ಹಂತಕ್ಕೆ ತಲುಪಿರುವುದರಿಂದ, ಸಿನಿಮಾದತ್ತ ಮುಖ ಮಾಡಲು ಇದು ಪ್ರಶಸ್ತ ಸಮಯ ಎನಿಸಿತು” ಎಂದು ವಿವರಿಸಿದ್ದಾರೆ.

“ಸದ್ಯ ಸಾಕಷ್ಟು ಧಾರಾವಾಹಿ ಅವಕಾಶಗಳು ಬರುತ್ತಿದ್ದರೂ, ಇನ್ನುಮುಂದೆ ಸಂಪೂರ್ಣ ಗಮನವನ್ನು ಸಿನಿಮಾಗಳ ಮೇಲೆಯೇ ಕೇಂದ್ರೀಕರಿಸಲಿದ್ದೇನೆ. ಒಂದೇ ವರ್ಷದಲ್ಲಿ ಎರಡು ವಿಭಿನ್ನ ವಾಹಿನಿಗಳಿಂದ ಪ್ರಶಸ್ತಿ ಪಡೆದ ಧನ್ಯತಾ ಭಾವದೊಂದಿಗೆ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದೇನೆ” ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ‘ಒಂದು ಶಿಕಾರಿಯ ಕಥೆ’ ಖ್ಯಾತಿಯ ನಿರ್ದೇಶಕ ಸಚಿನ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಯಶ್ವಂತ್ ‘ಶ್ರೀ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಂದಾರ ಬಟ್ಟಲಹಳ್ಳಿ, ಸ್ಕಂದ ಅಶೋಕ್ ಸೇರಿದಂತೆ ಹಲವರು ನಟಿಸಿದ್ದಾರೆ.