BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ 10ನೇ ವಾರಕ್ಕೆ ಕಾಲಿಟ್ಟಿದ್ದು, ವಾರಾಂತ್ಯದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಜಗದೀಶ್‌ಗೆ, ಈ ಕೂಡಲೇ ಕ್ಯಾಪ್ಟನ್ ರೂಮ್ ಖಾಲಿ ಮಾಡುವಂತೆ ಸುದೀಪ್ ಕಡಾಖಂಡಿತವಾಗಿ ಆದೇಶಿಸಿದ್ದಾರೆ. ಈ ವಾರ ಮನೆಗೆ ಯಾವುದೇ ಕ್ಯಾಪ್ಟನ್ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಇಡೀ ಮನೆಗೆ ಕಠಿಣ ಶಿಕ್ಷೆ ನೀಡಿದ್ದಾರೆ.
9ನೇ ವಾರದಲ್ಲಿ ಮಂಜ ಮತ್ತು ಯಶಸ್ ಕೃಷ್ಣ ನೇತೃತ್ವದ ಎರಡು ತಂಡಗಳ ನಡುವೆ ನಡೆದ ಟಾಸ್ಕ್‌ಗಳ ಎಡವಟ್ಟುಗಳೇ ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ. ಮೊದಲಿಗೆ ನಡೆದ ‘6 ಅಡಿ ಕಟೌಟ್’ಗೆ ಬಣ್ಣ ಬಳಿಯುವ ಟಾಸ್ಕ್‌ನಲ್ಲಿ ಮಂಜ ಮತ್ತು ಯಶಸ್ ನಡುವಿನ ವೈಯಕ್ತಿಕ ದ್ವೇಷದಿಂದ ಆಟ ರದ್ದಾಗಿತ್ತು. ವಾಸ್ತವವಾಗಿ ಈ ಟಾಸ್ಕ್‌ನಲ್ಲಿ ಯಶಸ್ ತಂಡ ಗೆಲ್ಲಬೇಕಿತ್ತು ಎಂದು ಸುದೀಪ್ ಅಭಿಪ್ರಾಯಪಟ್ಟರು. ನಂತರ ನಡೆದ ‘ಪುಷ್ಪರಾಜ’ ಟಾಸ್ಕ್‌ನಲ್ಲಿ ಹೂವುಗಳನ್ನು ರಕ್ಷಿಸಿಕೊಳ್ಳುವ ಮುಖ್ಯ ನಿಯಮವನ್ನು ಸ್ಪರ್ಧಿಗಳು ಗಾಳಿಗೆ ತೂರಿದ್ದರು. ಉಸ್ತುವಾರಿಯಾಗಿದ್ದ ಆಸಿಯಾ ಕೂಡ ತಮ್ಮ ಹಳೆಯ ದ್ವೇಷದಿಂದಾಗಿ ಆಟವನ್ನು ನಿಲ್ಲಿಸಿ ನಿಯಮ ಪಾಲಿಸುವಂತೆ ಮಾಡುವಲ್ಲಿ ವಿಫಲರಾದರು ಎಂದು ಸುದೀಪ್ ತರಾಟೆಗೆ ತೆಗೆದುಕೊಂಡರು.
ಸ್ಪರ್ಧಿಗಳಲ್ಲಿ ಆಟದ ಬಗ್ಗೆ ಗಂಭೀರತೆಯೇ ಇಲ್ಲದೆ ಇಡೀ ವಾರವನ್ನು ವ್ಯರ್ಥ ಮಾಡಿದ್ದಾರೆ ಎಂದು ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಈ ಬೇಜವಾಬ್ದಾರಿತನಕ್ಕೆ ಶಿಕ್ಷೆಯಾಗಿ ಈ ವಾರ ಮನೆಗೆ ಕ್ಯಾಪ್ಟನ್ ಇರುವುದಿಲ್ಲ. ಜಗದೀಶ್ ಹೋಗಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಬನ್ನಿ, ಕ್ಯಾಪ್ಟನ್ ರೂಮ್ ಕ್ಲೋಸ್ ಆಗುತ್ತದೆ” ಎಂದು ಸುದೀಪ್ ಆದೇಶಿಸುವ ಮೂಲಕ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.






















