BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ನಡುವಿನ ದಿಢೀರ್ ಜಗಳ ಮತ್ತು ಅಷ್ಟೇ ಬೇಗ ಒಂದಾದ ನಾಟಕೀಯ ಬೆಳವಣಿಗೆಗೆ ಕಿಚ್ಚ ಸುದೀಪ್ ಶನಿವಾರದ ಪಂಚಾಯಿತಿಯಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರದ ಟಾಸ್ಕ್ ಒಂದರಲ್ಲಿ ಸಣ್ಣ ಚೆಂಡಿನ ವಿಚಾರವಾಗಿ ಗಗನ್ ತಾಳ್ಮೆ ಕಳೆದುಕೊಂಡು ತಾಂಡವ್ ಅವರನ್ನು ‘ಕುನ್ನಿ’ ಎಂದು ಏಕವಚನದಲ್ಲಿ ನಿಂದಿಸಿದ್ದರು. ಇದರಿಂದ ಕೆರಳಿದ ತಾಂಡವ್ ಕೂಡ ಹೊಡೆಯುವ-ಬಡಿಯುವ ಮಟ್ಟಕ್ಕೆ ಹಿಂಸಾತ್ಮಕ ಬೆದರಿಕೆ ಹಾಕಿದ್ದರು.
ಆದ್ರೆ ಇಷ್ಟೆಲ್ಲಾ ರಂಪಾಟ ನಡೆದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಏನೂ ನಡೆದೇ ಇಲ್ಲ ಎಂಬಂತೆ ಒಂದಾಗಿದ್ದು, ಊಟದ ಮೇಜಿನಲ್ಲಿ ಗಗನ್ ಸ್ವತಃ ತಾಂಡವ್ಗೆ ಕೈತುತ್ತು ತಿನ್ನಿಸಿದ್ದರು. ಇವರ ಈ ಕ್ಷಣಾರ್ಧದ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಸುದೀಪ್, “ಮಂಜ ಬಂದು ಹೊರಗಿನ ರಿಪೋರ್ಟ್ ಕೊಟ್ಟಿದ್ದಕ್ಕೆ ನಿಮ್ಮಿಬ್ಬರ ನಡುವೆ ಈ ಜಗಳವಾಯಿತೇ?” ಎಂದು ನೇರವಾಗಿ ಪ್ರಶ್ನಿಸಿದರು. ಇಬ್ಬರೂ ಇದನ್ನು ನಿರಾಕರಿಸಿ ಬೇರೆ ಕಾರಣಗಳನ್ನು ನೀಡಿದಾಗ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಒಂದು ಚೆಂಡಿಗಾಗಿ ಗಗನ್ ಅಷ್ಟೊಂದು ಕೋಪಗೊಳ್ಳುವ ಅಗತ್ಯವಿರಲಿಲ್ಲ, ತಾಂಡವ್ ಕೂಡ ಹಿಂಸಾತ್ಮಕ ಬೆದರಿಕೆ ಹಾಕುವುದು ಸರಿಯಲ್ಲ” ಎಂದು ಎಚ್ಚರಿಸಿದ ಕಿಚ್ಚ, “ಅಷ್ಟೆಲ್ಲಾ ಕಿತ್ತಾಡಿದ ಮೇಲೆ ಪರಸ್ಪರ ಊಟ ತಿನ್ನಿಸುವ ಅವಶ್ಯಕತೆ ಏನಿತ್ತು? ನಿಮ್ಮ ಈ ವರ್ತನೆಯಿಂದ ಹೊರಗಡೆ ವೀಕ್ಷಕರಿಗೆ ನಿಮ್ಮ ಜಗಳವೂ ಫೇಕ್, ಸ್ನೇಹವೂ ಫೇಕ್ ಎನಿಸುತ್ತದೆ. ಜನರ ಕಣ್ಣಿಗೆ ನೀವಿಬ್ಬರೂ ಜೋಕರ್ಗಳ ರೀತಿ ಕಾಣಿಸುತ್ತಿದ್ದೀರಿ” ಎಂದು ನೇರ ಮಾತುಗಳಲ್ಲಿ ಬಿಸಿ ಮುಟ್ಟಿಸಿದ್ದಾರೆ.






















