SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಕೆಪಿಎಸ್‌ಸಿ ಪರೀಕ್ಷೆಗೆ ಹೈಟೆಕ್ ಭದ್ರತೆ, ಜಾಮರ್ ಅಳವಡಿಕೆ

ದಾವಣಗೆರೆ: ಕೆಪಿಎಸ್‌ಸಿ ಪರೀಕ್ಷೆಗೆ ಹೈಟೆಕ್ ಭದ್ರತೆ, ಜಾಮರ್ ಅಳವಡಿಕೆ

0
82

ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗದಿಂದ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ಬೆಳಗ್ಗೆ 10 ಗಂಟೆಗೆ ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಲ್ಲಿ ಆರಂಭಗೊಂಡಿತು.

ಜಿಲ್ಲೆಯಲ್ಲಿ ಒಟ್ಟು 7,842 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಜಿಲ್ಲಾಡಳಿತವು ಹೈಟೆಕ್ ಭದ್ರತಾ ವ್ಯವಸ್ಥೆ ಸೇರಿದಂತೆ ಬಿಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸಿಸಿಟಿವಿ, ವೆಬ್‌ಕಾಸ್ಟ್ ಮೂಲಕ ಕಣ್ಗಾವಲು: ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಪಿಎಸ್‌ಸಿ ಕೇಂದ್ರ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಸ್ಮಾರ್ಟ್‌ಸಿಟಿ ಕಮಾಂಡ್ ಸೆಂಟರ್‌ನಿಂದ ನೇರ ವೆಬ್‌ಕಾಸ್ಟ್ ಮೂಲಕ ಪರೀಕ್ಷಾ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದೆ.

ಮೂರು ಪ್ರತಿಗಳ ಒಎಂಆರ್ ಶೀಟ್: ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಬಾರಿ ಮೂರು ಪ್ರತಿಗಳ ಒಎಂಆರ್ ಉತ್ತರ ಪತ್ರಿಕೆ ವ್ಯವಸ್ಥೆ ಮಾಡಲಾಗಿದೆ. ಒಂದು ಪ್ರತಿಯನ್ನು ಅಭ್ಯರ್ಥಿಗಳು ತಮ್ಮ ಬಳಿ ಇಟ್ಟುಕೊಳ್ಳಬಹುದು. ಮತ್ತೊಂದು ಪ್ರತಿಯನ್ನು ಕೆಪಿಎಸ್‌ಸಿ ಸ್ಕ್ಯಾನಿಂಗ್‌ಗೆ ಕಳುಹಿಸಲಾಗುತ್ತದೆ. ಮೂರನೇ ಪ್ರತಿಯನ್ನು ಜಿಲ್ಲಾಧಿಕಾರಿಗಳ ಭದ್ರತೆಯಲ್ಲಿ ಕಾಯ್ದಿರಿಸಲಾಗುತ್ತದೆ.
ಪರೀಕ್ಷೆ ಮುಗಿದ ತಕ್ಷಣ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್‌ಗಳನ್ನು ಸೀಲ್ ಮಾಡಿ, 24 ಗಂಟೆಯೂ ಪೊಲೀಸ್ ಹಾಗೂ ಸಿಸಿಟಿವಿ ಭದ್ರತೆಯಿರುವ ಜಿಲ್ಲಾ ಖಜಾನೆಗೆ ರವಾನಿಸಲಾಗುತ್ತದೆ. ಪರೀಕ್ಷೆ ಮುಗಿದ 2ರಿಂದ 3 ಗಂಟೆಗಳ ಒಳಗಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪೂರ್ಣಗೊಳಿಸಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.


ಸಿಬ್ಬಂದಿ ನಿಯೋಜನೆ, ಮೊಬೈಲ್ ನಿಷೇಧ: ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು, ಐದು ರೂಟ್‌ಗಳಿಗೆ 10 ರೂಟ್ ಅಧಿಕಾರಿಗಳನ್ನು ಹಾಗೂ ನಾಲ್ವರು ವೀಕ್ಷಕರನ್ನು ನಿಯೋಜಿಸಲಾಗಿದೆ. ಮೇಲ್ವಿಚಾರಕರನ್ನು ಹೊರತುಪಡಿಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಯಾರಿಗೂ ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ಅಭ್ಯರ್ಥಿಗಳ ಸಮಯ ಪಾಲನೆಗಾಗಿ ಪ್ರತಿ ಕೊಠಡಿಯಲ್ಲೂ ಗಡಿಯಾರ ಅಳವಡಿಸಲಾಗಿದೆ. ಅಭ್ಯರ್ಥಿಗಳು ತರುವ ಮೊಬೈಲ್ ಹಾಗೂ ಪುಸ್ತಕಗಳನ್ನು ಇರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ವೈದ್ಯಕೀಯ ಸೌಲಭ್ಯ: ಶ್ರವಣ ಸಾಧನಗಳ ದುರ್ಬಳಕೆ ತಡೆಯಲು ಹಾಗೂ ತುರ್ತು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಎಲ್ಲ 13 ಪರೀಕ್ಷಾ ಕೇಂದ್ರಗಳಲ್ಲೂ ಇಎನ್‌ಟಿ ವೈದ್ಯರಿಂದ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಿಗಾಗಿ ಆಂಬ್ಯುಲೆನ್ಸ್‌ಗಳನ್ನೂ ಸಿದ್ಧವಾಗಿಡಲಾಗಿದೆ.

ಜೆರಾಕ್ಸ್ ಅಂಗಡಿಗಳು ಬಂದ್: ಪರೀಕ್ಷಾ ಕೇಂದ್ರಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಹಾಗೂ 200ರಿಂದ 300 ಮೀಟರ್ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಪರೀಕ್ಷೆ ನಡೆಯುವ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಬೆಸ್ಕಾಂಗೆ ಸೂಚನೆ ನೀಡಲಾಗಿದೆ.


ವಸ್ತ್ರ ಸಂಹಿತೆ ಜಾರಿ: ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದ್ದು, ಪುರುಷ ಅಭ್ಯರ್ಥಿಗಳಿಗೆ ಜನಿವಾರ, ಉಡದಾರ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕಿವಿಯೋಲೆ ಹೊರತುಪಡಿಸಿ ಮಾಂಗಲ್ಯ ಸರ, ಕೈಬಳೆ, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ ಮತ್ತು ಹಣೆಬೊಟ್ಟು ಧರಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ನಂಬಿಕೆಯ ಭಾಗವಾಗಿ ಕೈಗೆ ಕಟ್ಟುವ ದಾರ, ಶಿವದಾರ, ಶಿವಲಿಂಗ, ಉಂಗುರ, ತಾಯಿತ ಹಾಗೂ ರುದ್ರಾಕ್ಷಿ ಧರಿಸಲು ಅನುಮತಿ ನೀಡಲಾಗಿದೆ.


ಶೂಗಳ ಬದಲಿಗೆ ತೆಳುವಾದ ಚಪ್ಪಲಿ ಧರಿಸಬೇಕು. ಕ್ಯಾಪ್, ಕಿವಿ, ತಲೆ ಹಾಗೂ ಮುಖ ಮುಚ್ಚುವ ಉಡುಪುಗಳು, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್, ಬ್ಯಾಗ್, ಪರ್ಸ್, ಮೊಬೈಲ್, ಬ್ಲೂಟೂತ್, ಇಯರ್‌ಫೋನ್, ಸ್ಮಾರ್ಟ್‌ವಾಚ್, ಕೈಗಡಿಯಾರ, ಕ್ಯಾಮೆರಾ, ಪೆನ್‌ಡ್ರೈವ್, ಎಲೆಕ್ಟ್ರಾನಿಕ್ ಪೆನ್ ಹಾಗೂ ಸ್ಕ್ಯಾನರ್ ಸೇರಿದಂತೆ ಎಲೆಕ್ಟ್ರಾನಿಕ್ ಮತ್ತು ಇತರೆ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ನಿರ್ಬಂಧಿಸಲಾಗಿದೆ.

ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಅವರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.