ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯಲ್ಲಿ ತಯಾರಾಗಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬರುವ ಡಿಸೆಂಬರ್ 11ರಂದು ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಮೂಲಕ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಹಾಡು ಹಿಟ್ ಆಗಿ ಗಮನ ಸೆಳೆದಿದೆ. ಇದರ ಬೆನ್ನಲ್ಲೇ, ಸ್ಯಾಂಡಲ್ವುಡ್ನ ಪ್ರತಿಷ್ಠಿತ ವಿತರಕ ಜಯಣ್ಣ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದು ಚಿತ್ರತಂಡಕ್ಕೆ ಆನೆಬಲ ತಂದಿದೆ.
ಇತ್ತೀಚೆಗೆ ಬ್ಲಾಕ್ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾ ವಿತರಿಸಿ ಭರ್ಜರಿ ಯಶಸ್ಸು ಕಂಡಿರುವ ಜಯಣ್ಣ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಸಾಥ್ ನೀಡಿರುವುದರಿಂದ, ರಾಜ್ಯದ ಮೂಲೆಮೂಲೆಗೂ ಸಿನಿಮಾ ತಲುಪುವ ವಿಶ್ವಾಸ ಹೆಚ್ಚಾಗಿದೆ. ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಕಂಟೆಂಟ್ ಕ್ರಿಯೇಟರ್ಸ್ ತಂಡ ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರ ಜೊತೆಗೆ ನಮನ್ ಅರೋರ, ಚೇತನ್ ಮಾರಂಬೀಡ್, ಧನ್ಯಶ್ರೀ ಸುಜಿತ್ ಸೇರಿದಂತೆ ದೊಡ್ಡ ತಾರಾಗಣವಿದೆ. ಧಾರವಾಡ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ ಹಾಗೂ ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ. ಸದ್ಯ ಪ್ರಚಾರಕ್ಕೆ ವೇಗ ನೀಡಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.






















