SK Home Ad
Home ಕ್ರೀಡೆ ತಂದೆ ಸೆಹ್ವಾಗ್, ಆದರ್ಶ ಕೊಹ್ಲಿ: ಪಾಕ್ ವಿರುದ್ಧ ನೋವಿನ ನಡುವೆಯೂ ಅರ್ಧಶತಕ ಸಿಡಿಸಿ ‘ವಿರಾಟ್ ಸ್ಟೈಲ್’ನಲ್ಲಿ...

ತಂದೆ ಸೆಹ್ವಾಗ್, ಆದರ್ಶ ಕೊಹ್ಲಿ: ಪಾಕ್ ವಿರುದ್ಧ ನೋವಿನ ನಡುವೆಯೂ ಅರ್ಧಶತಕ ಸಿಡಿಸಿ ‘ವಿರಾಟ್ ಸ್ಟೈಲ್’ನಲ್ಲಿ ಸಂಭ್ರಮಿಸಿದ ಆರ್ಯವೀರ್

0
20

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್, ಅಂಡರ್-19 ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಕೆಚ್ಚೆದೆಯ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ.

15 ವರ್ಷದ ಈ ಯುವ ಆರಂಭಿಕ ಆಟಗಾರ, ಬ್ಯಾಟಿಂಗ್ ವೇಳೆ ಪಾಕ್ ವೇಗಿಯ ಬೌನ್ಸರ್ ಎಸೆತವನ್ನು ಮೊಣಕೈ ಕೆಳಭಾಗಕ್ಕೆ ತಿಂದರೂ ತೀವ್ರ ನೋವನ್ನು ಲೆಕ್ಕಿಸದೆ ದಿಟ್ಟ ಆಟವಾಡಿದರು. ಕೇವಲ 61 ಎಸೆತಗಳಲ್ಲಿ 9 ಆಕರ್ಷಕ ಬೌಂಡರಿಗಳ ನೆರವಿನಿಂದ 58 ರನ್ ಸಿಡಿಸಿದ ಆರ್ಯವೀರ್, ಅರ್ಧಶತಕ ಪೂರೈಸಿದ ತಕ್ಷಣ ತಮ್ಮ ನೆಚ್ಚಿನ ಆರಾಧ್ಯ ದೈವ ವಿರಾಟ್ ಕೊಹ್ಲಿ ಶೈಲಿಯಲ್ಲಿ ಬ್ಯಾಟ್ ಕೆಳಗಿಟ್ಟು ‘ನನ್ನ ಬ್ಯಾಟ್ ಮಾತನಾಡುತ್ತದೆ’ ಎಂಬಂತೆ ಸಂಭ್ರಮಿಸಿ ಕ್ರೀಡಾಭಿಮಾನಿಗಳ ಮನಗೆದ್ದರು.

ಇಡೀ ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್ ಪ್ರದರ್ಶಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮಿಂಚಿರುವ ಆರ್ಯವೀರ್, ಫೈನಲ್‌ನಲ್ಲೂ ನಾಯಕ ಲಕ್ಷ್ಯ ರಾಯ್‌ಚಂದಾನಿ ಜೊತೆಗೂಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಭದ್ರ ಬುನಾದಿ ಹಾಕಿಕೊಟ್ಟರು.

2018ರಲ್ಲಿ ಪರ್ತ್ ಟೆಸ್ಟ್ ಶತಕದ ವೇಳೆ ವಿರಾಟ್ ಕೊಹ್ಲಿ ಮಾಡಿದ್ದ ಐಕಾನಿಕ್ ಸಂಭ್ರಮಾಚರಣೆಯನ್ನು ಆರ್ಯವೀರ್ ಮರುಸೃಷ್ಟಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಅಂಡರ್-19 ತಂಡ, ಆರಂಭಿಕ ಆಟಗಾರ ಉಸ್ಮಾನ್ ಖಾನ್ ಸಿಡಿಸಿದ ಅಮೋಘ ಶತಕ (107 ರನ್, 111 ಎಸೆತ), ಅಬ್ದುಲ್ ಖಾದಿರ್ (80 ರನ್, 54 ಎಸೆತ) ಹಾಗೂ ನಾಯಕ ಫರ್ಹಾನ್ ಯೂಸುಫ್ (63 ರನ್) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತು. ಭಾರತದ ಪರ ಡೆತ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ನಡೆಸಿದ ಕಾವ್ಯ ಪಟೇಲ್ 4 ವಿಕೆಟ್ ಹಾಗೂ ಚಿಗುರುಪಾಟಿ ವೆಂಕಟ 3 ವಿಕೆಟ್ ಪಡೆದು ಪಾಕ್ ತಂಡ 350ರ ಗಡಿ ದಾಟದಂತೆ ಕಟ್ಟಿಹಾಕಿದರು.