BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ 10ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ಗಳು ತೀವ್ರ ರೋಚಕ ತಿರುವುಗಳನ್ನು ಪಡೆದುಕೊಂಡಿವೆ. ಈ ವಾರದ ಕ್ಯಾಪ್ಟನ್ಸಿ ಆಟದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದು, “ಒಂದು ಬಾರಿ ಕ್ಯಾಪ್ಟನ್ ಆಗಿದ್ದು ಸಾಕು, ಮತ್ತೊಮ್ಮೆ ಬೇಡ” ಎಂದುಕೊಂಡಿದ್ದ ‘ಜಗ್ಗ ಮಮ್ಮಿ’ ಖ್ಯಾತಿಯ ಜಗದೀಶ್ ಅವರಿಗೆ ಮತ್ತೊಮ್ಮೆ ಮನೆಯ ನಾಯಕತ್ವದ ಪಟ್ಟ ಒಲಿದುಬಂದಿದೆ. ಈ ಮೂಲಕ ಸೀಸನ್ 13ರಲ್ಲಿ ಎರಡನೇ ಬಾರಿಗೆ ಕ್ಯಾಪ್ಟನ್ ಆದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಜಗದೀಶ್ ಪಾತ್ರರಾಗಿದ್ದಾರೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಜೋಡಿಯಾಗಿ ಮೈತ್ರಿ ಮಾಡಿಕೊಂಡು ಆಡಬೇಕಿತ್ತು. ಅದರಂತೆ ಜಗದೀಶ್ ಅವರು ತಾಂಡವ್ ರಾಮ್ ಅವರೊಂದಿಗೆ ಕೈಜೋಡಿಸಿ ಆಡಿ ಭರ್ಜರಿ ಜಯ ಸಾಧಿಸಿದರು. ಆದರೆ ಈ ಸಂಭ್ರಮದ ನಡುವೆಯೇ ಮನೆಯ ಮತ್ತೊಂದು ಮೂಲೆಯಲ್ಲಿ ಭಾವುಕ ಸನ್ನಿವೇಶ ನಿರ್ಮಾಣವಾಯಿತು. ಧನುಷ್ ಅವರು ಪ್ರಶಾಂತ್ ಅವರೊಂದಿಗೆ ಮೈತ್ರಿ ಮಾಡಿಕೊಂಡು ಅತ್ಯುತ್ತಮವಾಗಿ ಆಟವಾಡುತ್ತಿದ್ದರು. ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಧನುಷ್ ಈ ಬಾರಿ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.
ಆದರೆ, ಆಟದ ಭರದಲ್ಲಿ ಪ್ರಶಾಂತ್ ಅವರ ಕೈಗೆ ತೀವ್ರ ಪೆಟ್ಟಾಗಿದ್ದು, ವೈದ್ಯರ ಸಲಹೆಯಂತೆ ಅವರು ಆಟದಿಂದ ಹಿಂದೆ ಸರಿಯಬೇಕಾಯಿತು. ಜೋಡಿಯಾಗಿ ಆಡಬೇಕಿದ್ದ ನಿಯಮವಿದ್ದ ಕಾರಣ, ಪ್ರಶಾಂತ್ ಅಲಭ್ಯತೆಯಿಂದಾಗಿ ಧನುಷ್ ಕೂಡ ಅನಿವಾರ್ಯವಾಗಿ ಕ್ಯಾಪ್ಟನ್ಸಿ ರೇಸ್ನಿಂದ ಹೊರಬೀಳಬೇಕಾಯಿತು. ಗೆಲ್ಲುವ ಹಂತದಲ್ಲಿದ್ದರೂ ತಮ್ಮದಲ್ಲದ ತಪ್ಪಿಗೆ ಅವಕಾಶ ಕಳೆದುಕೊಂಡಿದ್ದಕ್ಕೆ ಧನುಷ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಇತ್ತ “ನನಗೆ ಲಕ್ ಇಲ್ಲ, ನನ್ನಿಂದಲೇ ಎಲ್ಲವಾಯಿತು” ಎಂದು ಪ್ರಶಾಂತ್ ಕೂಡ ಭಾವುಕರಾದರು. ಒಟ್ಟಿನಲ್ಲಿ ಈ ವಾರದ ಕ್ಯಾಪ್ಟನ್ಸಿ ಆಟ ಜಗದೀಶ್ ಪಾಲಿಗೆ ಅದೃಷ್ಟ ತಂದರೆ, ಧನುಷ್ ಪಾಲಿಗೆ ಕಣ್ಣೀರಿನ ಕಥೆಯಾಗಿ ಮುಕ್ತಾಯಗೊಂಡಿತು.






















