SK Home Ad
Home ಸುದ್ದಿ ರಾಜ್ಯ ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಸಮರ: ನೋಂದಣಿ ಮಾಡಿಸುವ ಎಚ್ಚರಿಕೆ

ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಸಮರ: ನೋಂದಣಿ ಮಾಡಿಸುವ ಎಚ್ಚರಿಕೆ

0
2

ಯಾದಗಿರಿ: ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಹಾಗಾಗಿ ನಾನು ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದರು.

ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್‌ರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, `ಜಾತಿ-ಧರ್ಮಗಳ ಮಧ್ಯೆ ಜಗಳ ಹಚ್ಚಿ ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳಾಗಿದ್ದು, ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸುವೆ’ ಎಂದರು.

1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು 150 ಬಾರಿ ಪ್ರತಿಭಟನೆ ನಡೆಸಿದ್ದವು. ಆರೆಸ್ಸೆಸ್‌ನ ಮುಖವಾಣಿ ಆರ್ಗನೈಸರ್' ಪತ್ರಿಕೆಯಲ್ಲಿ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಲಾಗಿತ್ತು.ಆರೆಸ್ಸೆಸ್ ಇನ್ನೂ ನೋಂದಾಯಿತ ಸಂಘಟನೆಯಾಗಿಲ್ಲ. ದಲಿತ ಸಂಘಟನೆಗಳಾದ ಡಿಎಸ್‌ಎಸ್‌ಗಳಿಗೇ ನೋಂದಣಿ ಇರುವಾಗ ಆರೆಸ್ಸೆಸ್‌ಗೂ ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಲಿದ್ದೇನೆ’ ಎಂದು ಹೇಳಿದರು.

ಆರೆಸ್ಸೆಸ್‌ನವರು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿ ಅಥವಾ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರೇ? ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸಿ, ಆತನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಗಾಂಧೀಜಿ ದೇಶದ್ರೋಹಿಯೇ? ಎಂದು ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತವಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿ, ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯಾರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಎಂಬುದನ್ನು ಜನರು ಮನಗಾಣಬೇಕು ಎಂದರು.

ಮನುವಾದಿ ಮನಸ್ಥಿತಿಗಳು ದೇಶವನ್ನು ಆಳಲು ಮುಂದಾಗಿರುವಾಗ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವುದು ಅಗತ್ಯ. ನಾನು ಯಾರಿಗೂ ಹೆದರುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಇಂತಹ ಎಷ್ಟೇ ಸವಾಲುಗಳು ಎದುರಾದರೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಹೇಳಿದರು.

ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ದಲಿತ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಜನಪ್ರತಿನಿಧಿಗಳಾಗಬಾರದೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸದಿರುವುದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿದಂತಹ ಘಟನೆಗಳು ಯಾವ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಪ್ರಶ್ನಿಸಿದರು.