SK Home Ad
Home ಸುದ್ದಿ ವಿದೇಶ ಟೆಸ್ಲಾದ ಹೊಸ ಅಧ್ಯಾಯ: 8 ನಗರಗಳಲ್ಲಿ 24/7 ಸ್ವಯಂಚಾಲಿತ ಟ್ಯಾಕ್ಸಿ ಸೇವೆ

ಟೆಸ್ಲಾದ ಹೊಸ ಅಧ್ಯಾಯ: 8 ನಗರಗಳಲ್ಲಿ 24/7 ಸ್ವಯಂಚಾಲಿತ ಟ್ಯಾಕ್ಸಿ ಸೇವೆ

0
47
ಸೈಬರ್‌ಕ್ಯಾಬ್ ಮತ್ತು ಮಾಡೆಲ್ ವೈ ಮೂಲಕ ಚಾಲಕರಹಿತ ಪ್ರಯಾಣ: ಟೆಸ್ಲಾ ಸೇವೆಗೆ ಮತ್ತಷ್ಟು ನಗರಗಳ ಸೇರ್ಪಡೆ

ಟೆಸ್ಲಾ ರೋಬೋಟ್ಯಾಕ್ಸಿ ಸೇವೆ 8 ನಗರಗಳಿಗೆ ವಿಸ್ತರಣೆ: ಆಸ್ಟಿನ್‌ನಿಂದ ಟ್ಯಾಂಪಾವರೆಗೆ ಚಾಲಕರಹಿತ ಪ್ರಯಾಣಕ್ಕೆ ಹೊಸ ವೇಗ!

ನವದೆಹಲಿ: ವಿಶ್ವದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಟೆಸ್ಲಾ, ಚಾಲಕರಹಿತ ಟ್ಯಾಕ್ಸಿ ಸೇವೆಯಾದ ರೋಬೋಟ್ಯಾಕ್ಸಿ (Robotaxi) ವ್ಯಾಪ್ತಿಯನ್ನು ಅಮೆರಿಕದ ಎಂಟು ನಗರಗಳಿಗೆ ವಿಸ್ತರಿಸಿದೆ. ಟೆಕ್ಸಾಸ್‌ನ ಆಸ್ಟಿನ್, ಡಲ್ಲಾಸ್, ಫೋರ್ಟ್ ವರ್ತ್, ಹ್ಯೂಸ್ಟನ್ ಮತ್ತು ಸ್ಯಾನ್ ಆಂಟೋನಿಯೊ ಹಾಗೂ ಫ್ಲೋರಿಡಾದ ಮಿಯಾಮಿ, ಒರ್ಲ್ಯಾಂಡೊ ಮತ್ತು ಟ್ಯಾಂಪಾ ನಗರಗಳಲ್ಲಿ ಈ ಸೇವೆ ಲಭ್ಯವಿದೆ. ನವೆಂಬರ್ 9ರಂದು ಸ್ಯಾನ್ ಆಂಟೋನಿಯೊ ನಗರಕ್ಕೂ ಸೇವೆ ಆರಂಭವಾಗಿರುವುದು ಇತ್ತೀಚಿನ ಪ್ರಮುಖ ಬೆಳವಣಿಗೆಯಾಗಿದೆ.

ಟೆಸ್ಲಾದ ಅಧಿಕೃತ ಮಾಹಿತಿಯ ಪ್ರಕಾರ, ರೋಬೋಟ್ಯಾಕ್ಸಿ ಸೇವೆಯಲ್ಲಿ ಮಾರ್ಪಡಿಸಿದ ಮಾಡೆಲ್ ವೈ (Model Y) ವಾಹನಗಳನ್ನು ಬಳಸಲಾಗುತ್ತಿದೆ. ಕಂಪನಿಯ ವಿಶೇಷವಾಗಿ ವಿನ್ಯಾಸಗೊಳಿಸಿದ ಸೈಬರ್‌ಕ್ಯಾಬ್ (Cybercab) ಕೂಡ ಈ ಸೇವಾ ವ್ಯವಸ್ಥೆಯ ಭಾಗವಾಗಿದೆ. ಆದರೆ ಸೈಬರ್‌ಕ್ಯಾಬ್‌ನಲ್ಲಿ ಸಾರ್ವಜನಿಕರು ಪ್ರಯಾಣಿಸುವ ಅವಕಾಶ ಪ್ರಸ್ತುತ ಆಸ್ಟಿನ್‌ನ ಸೀಮಿತ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ.

ಸ್ಯಾನ್ ಆಂಟೋನಿಯೊದಲ್ಲಿ ಹೊಸ ಸೇವೆ ಆರಂಭ : ನವೆಂಬರ್ 9ರಿಂದ ಸ್ಯಾನ್ ಆಂಟೋನಿಯೊದಲ್ಲಿ ರೋಬೋಟ್ಯಾಕ್ಸಿ ಸೇವೆ ಆರಂಭಿಸಿರುವುದಾಗಿ ಟೆಸ್ಲಾ ಘೋಷಿಸಿತ್ತು. ಸುಮಾರು 274 ಚದರ ಮೈಲುಗಳ ಸೇವಾ ವ್ಯಾಪ್ತಿಯೊಂದಿಗೆ ಆರಂಭವಾದ ಈ ನಗರವು ಕಂಪನಿಯ ಪ್ರಮುಖ ವಿಸ್ತರಣೆಯಾಗಿದೆ. ಇದಕ್ಕೂ ಮೊದಲು ನವೆಂಬರ್ 2ರಂದು ಫೋರ್ಟ್ ವರ್ತ್‌ನಲ್ಲಿ ಸೇವೆ ಆರಂಭಿಸಲಾಗಿತ್ತು. ಆಸ್ಟಿನ್‌ನಲ್ಲಿಯೂ ಸೇವಾ ವ್ಯಾಪ್ತಿಯನ್ನು ಸುಮಾರು 171 ಚದರ ಮೈಲುಗಳಷ್ಟು ಹೆಚ್ಚಿಸಿ, ಒಟ್ಟು 443 ಚದರ ಮೈಲುಗಳಿಗೆ ವಿಸ್ತರಿಸಿರುವುದಾಗಿ ವರದಿಯಾಗಿದೆ.

24 ಗಂಟೆಗಳ ಸೇವೆ : ರೋಬೋಟ್ಯಾಕ್ಸಿ ಸೇವೆ ಈಗ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ ಎಂದು ಟೆಸ್ಲಾ ಅಧಿಕೃತ ಖಾತೆ ರೋಬೋಟ್ಯಾಕ್ಸಿ ದೃಡಪಡಿಸಿದ್ದು ಆಸ್ಟಿನ್, ಸ್ಯಾನ್ ಅಂಟೋನಿಯೋ, ಹ್ಯೂಸ್ಟನ್, ಫೋರ್ಟ್ ವರ್ತ್, ಡಾಲಾಸ್, ಮಿಯಾಮಿ, ಆರ್ಲ್ಯಾಂಡೋ, ಟ್ಯಾಂಪಾ – ಎಲ್ಲಾ 8 ನಗರಗಳಲ್ಲಿ ಈಗ ಪೂರ್ಣ 24 ಗಂಟೆ ಸೇವೆ ನಡೆಯುತ್ತಿದೆ.

ಸುರಕ್ಷತೆ ಮತ್ತು ಸ್ವಯಂಚಾಲಿತ ಚಾಲನಾ ತಂತ್ರಜ್ಞಾನ : ರೋಬೋಟ್ಯಾಕ್ಸಿ ಸೇವೆಯ ಪ್ರಮುಖ ಆಧಾರ ಟೆಸ್ಲಾದ ಸ್ವಯಂಚಾಲಿತ ಚಾಲನಾ ತಂತ್ರಜ್ಞಾನ. ವಾಹನಗಳಲ್ಲಿರುವ ಕ್ಯಾಮೆರಾಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳು ರಸ್ತೆ ಪರಿಸ್ಥಿತಿ, ಇತರ ವಾಹನಗಳು, ಪಾದಚಾರಿಗಳು ಮತ್ತು ಸಂಚಾರ ಸಂಕೇತಗಳನ್ನು ಗುರುತಿಸಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತವೆ. ಟೆಸ್ಲಾ ಪ್ರಕಟಿಸಿರುವ ಸುರಕ್ಷತಾ ವರದಿಯಲ್ಲಿ ರಾತ್ರಿ ಸಮಯ, ಮಳೆ ಮತ್ತು ವಾಹನ ದಟ್ಟಣೆಯ ಸಂದರ್ಭಗಳಲ್ಲಿನ ಚಾಲನಾ ಮಾಹಿತಿಯನ್ನೂ ಹಂಚಿಕೊಂಡಿದೆ.

ಒಟ್ಟಿನಲ್ಲಿ, ಎಂಟು ಅಮೆರಿಕನ್ ನಗರಗಳಿಗೆ ರೋಬೋಟ್ಯಾಕ್ಸಿ ಸೇವೆಯನ್ನು ವಿಸ್ತರಿಸಿರುವುದು ಟೆಸ್ಲಾದ ಸ್ವಯಂಚಾಲಿತ ಸಾರಿಗೆ ಯೋಜನೆಗೆ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ಸೇವೆ ವಿಸ್ತರಣೆ, ಸೈಬರ್‌ಕ್ಯಾಬ್ ಬಳಕೆಯ ಹೆಚ್ಚಳ ಮತ್ತು ಕಾರ್ಯಾಚರಣೆಯ ಸಮಯ ವಿಸ್ತರಣೆ ಕುರಿತು ಕಂಪನಿಯ ಮುಂದಿನ ನಿರ್ಧಾರಗಳು ಕುತೂಹಲ ಮೂಡಿಸಿವೆ.