ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರಿಗೆ ವಲಯದಲ್ಲಿ ಹೊಸದೊಂದು ದರ ಸಮರಕ್ಕೆ ವೇದಿಕೆ ಸಜ್ಜಾಗಿದೆ. ವಿಯೆಟ್ನಾಂ ಮೂಲದ ವಿನ್ಗ್ರೂಪ್ ಸಂಸ್ಥೆಗೆ ಸೇರಿದ ಸಂಪೂರ್ಣ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆ ‘ಗ್ರೀನ್ ಎಸ್ಎಂ’ (GSM), ದೆಹಲಿ ಮತ್ತು ಹೈದರಾಬಾದ್ ಬಳಿಕ ಇದೀಗ ಬೆಂಗಳೂರಿಗೆ ಅಧಿಕೃತವಾಗಿ ಕಾಲಿಟ್ಟಿದೆ. ನಗರದ ಇಂದಿರಾನಗರ ಆರ್ಟಿಒ ಕಚೇರಿಯಲ್ಲಿ ಈಗಾಗಲೇ 100 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಚಾಲಕರಿಗೆ ಮಾಸಿಕ ವೇತನ ನೀಡಿ ಸೇವೆ ಆರಂಭಿಸಲು ಕಂಪನಿ ಸಿದ್ಧತೆ ನಡೆಸಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಆಟೋ ದರ ಪ್ರತಿ ಕಿ.ಮೀ.ಗೆ ₹13-15, ಕ್ಯಾಬ್ ದರ ₹20-23 ಹಾಗೂ ಬೈಕ್ ಟ್ಯಾಕ್ಸಿ ದರ ₹10 ರಷ್ಟಿದೆ. ಆದರೆ, ಗ್ರೀನ್ ಎಸ್ಎಂ ಸಂಸ್ಥೆಯು ಪ್ರತಿ ಕಿ.ಮೀ.ಗೆ ಕೇವಲ ₹8 ರಷ್ಟು ಕನಿಷ್ಠ ದರ ನಿಗದಿಪಡಿಸಲು ಮುಂದಾಗಿದೆ. ಈ ಅಗ್ಗದ ದರವು ಪ್ರಯಾಣಿಕರಿಗೆ ಸಂತಸ ತಂದಿದ್ದರೆ, ಮಾರುಕಟ್ಟೆಯಲ್ಲಿರುವ ಓಲಾ, ಉಬರ್ ಮತ್ತು ರ್ಯಾಪಿಡೋ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ಇನ್ನೊಂದೆಡೆ, ಈ ಹೊಸ ಕ್ಯಾಬ್ ಸೇವೆಯು ಸ್ಥಳೀಯ ಆಟೋ ಮತ್ತು ಕ್ಯಾಬ್ ಚಾಲಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ವಾಹನ ಖರೀದಿಸಿರುವ ಚಾಲಕರು, ಈ ಕಡಿಮೆ ದರದ ಪೈಪೋಟಿಯಿಂದ ತಮ್ಮ ಜೀವನೋಪಾಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಅಳಲು ತೋಡಿಕೊಂಡಿದ್ದು, ಈ ಸೇವೆಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.




















