ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ‘ಅಗ್ನಿಪರೀಕ್ಷೆ’ ಮೂಲಕ ಪ್ರವೇಶಿಸಿ ಗಮನ ಸೆಳೆದಿದ್ದ 21 ವರ್ಷದ ಕುಮಾರಿ, ಅನಾರೋಗ್ಯದ ಕಾರಣದಿಂದಾಗಿ ಆಟವನ್ನು ಅರ್ಧಕ್ಕೇ ಮುಗಿಸಿ ಕೇವಲ ಒಂದೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಉಡುಪು ಹಾಗೂ ‘ಸಿಂಪತಿ ಕಾರ್ಡ್’ ಬಳಕೆಯ ವಿಚಾರವಾಗಿ ತೀವ್ರ ಟ್ರೋಲ್‌ಗಳು ಎದುರಾಗಿದ್ದವು.
ಆರೋಗ್ಯ ಚೇತರಿಸಿಕೊಂಡ ನಂತರ ಮತ್ತೆ ಕಿಚ್ಚ ಸುದೀಪ್ ಅವರೊಂದಿಗಿನ ವೇದಿಕೆಗೆ ಆಗಮಿಸಿದ ಕುಮಾರಿ ಹಾಗೂ ಅವರ ಕುಟುಂಬದವರು ತಮ್ಮ ಮೇಲಾದ ಟ್ರೋಲ್‌ಗಳ ಕುರಿತು ಅಳಲು ತೋಡಿಕೊಂಡರು. “ರೀಲ್ಸ್‌ನಲ್ಲಿ ಕಲರ್ ಫುಲ್ ಡ್ರೆಸ್ ಹಾಕುವ ಕುಮಾರಿ, ಬಿಗ್ ಬಾಸ್ ವೇದಿಕೆ ಮೇಲೆ ಹಳೇ ಬಟ್ಟೆ ಧರಿಸಿ ಸಿಂಪತಿ ಪಡೆಯಲು ನಾಟಕವಾಡುತ್ತಿದ್ದಾರೆ ಎಂಬ ಕಠೋರ ಕಾಮೆಂಟ್‌ಗಳು ನೋವು ತಂದಿವೆ” ಎಂದು ಕುಮಾರಿ ಕಣ್ಣೀರಿಟ್ಟರು.
ಕುಮಾರಿಯ ಬೇಸರ ಆಲಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅವರಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬಿದರು. “ನಮ್ಮ ಜನ ಸಾಕ್ಷಾತ್ ಸೀತೆಯನ್ನೇ ಬಿಟ್ಟಿಲ್ಲ, ಹೀಗಿರುವಾಗ ಎಲ್ಲೋ ಕುಳಿತು ಕಾಮೆಂಟ್ ಮಾಡುವವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸಾಧನೆಯನ್ನು ತಲುಪಲು ಅವರಿಂದ ಸಾಧ್ಯವಿಲ್ಲ, ಅವರು ಅಲ್ಲೇ ಇರುತ್ತಾರೆ, ನೀವು ಬೆಳೆಯುತ್ತಾ ಹೋಗಿ,” ಎಂದು ಸಮಾಧಾನದ ಕಿವಿಮಾತು ಹೇಳಿದರು.






















