ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ 9ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರೇಕ್ಷಕರಿಗೆ ಕಾಯುತ್ತಿದ್ದ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅಸಭ್ಯ ವರ್ತನೆ ಹಾಗೂ ಮಾತುಗಳಿಂದ ಹೊರಬಿದ್ದಿದ್ದ ‘ಮಾಡರ್ನ್ ಮಹಾಕವಿ’ ಮಂಜು ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಮರಳಿದ್ದಾರೆ. ಆದರೆ ಮನೆಗೆ ಕಾಲಿಡುತ್ತಿದ್ದಂತೆಯೇ ತಮ್ಮ ಅತಿರೇಕದ ವರ್ತನೆಯಿಂದ ಇಡೀ ಮನೆಯ ವಾತಾವರಣವನ್ನೇ ಅಸ್ತವ್ಯಸ್ತಗೊಳಿಸಿದ್ದಾರೆ.
ದೀಪಾವಳಿ ಹಬ್ಬದ ಕಾರಣ ಈ ವಾರ ಯಾವುದೇ ಸ್ಪರ್ಧಿಯ ಎಲಿಮಿನೇಷನ್ ನಡೆದಿಲ್ಲ. ಬದಲಿಗೆ, ಸೈಲೆಂಟ್ ಆಗಿರುವ ಸ್ಪರ್ಧಿಗಳನ್ನು ಎಚ್ಚರಿಸಲು ಮಂಜು ಅವರನ್ನು ಬಿಗ್ ಬಾಸ್ ಟಾಸ್ಕ್ ಒಂದರ ಭಾಗವಾಗಿ ಮನೆಗೆ ಕಳುಹಿಸಲಾಗಿದೆ. ಬೆಳ್ಳಂಬೆಳಗ್ಗೆ ಸುಖ ನಿದ್ರೆಯಲ್ಲಿದ್ದ ಸ್ಪರ್ಧಿಗಳ ಎದುರು ಮಂಜು ಕಸದ ಚೀಲಗಳನ್ನು ತಂದು ಇಡೀ ಮನೆಯ ತುಂಬಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಜೊತೆಗೆ ಸ್ಪರ್ಧಿಗಳ ಉಡುಪುಗಳನ್ನು ಹಾಳು ಮಾಡುವ ಮೂಲಕ ದೊಡ್ಡ ಮಟ್ಟದ ಗೊಂದಲ ಹಾಗೂ ಕೋಲಾಹಲ ಸೃಷ್ಟಿಸಿದ್ದಾರೆ.
ಮಂಜು ಚೆಲ್ಲಿರುವ ಈ ಕಸದ ರಾಶಿಯನ್ನು ಸ್ಪರ್ಧಿಗಳು ಕ್ಲೀನ್ ಮಾಡಬೇಕಿದ್ದು, ಅದನ್ನು ಆಧರಿಸಿ ಈ ವಾರದ ಗ್ರೋಸರಿ ನೀಡಲಾಗುತ್ತದೆ. ಈ ಹಿಂದೆ ಸುದೀಪ್ ಅವರು ಮಂಜು ಅವರಿಗೆ ಎಚ್ಚರಿಕೆ ನೀಡಿ, ‘ರೆಡ್ ಕಾರ್ಡ್’ ಭಯದ ನಡುವೆಯೇ ಅತಿಥಿಯಾಗಿ ಕಳುಹಿಸಿದ್ದರು. ಆದರೆ ಮಂಜು ಮನೆಗೆ ಬಂದು ಮಾಡಿರುವ ಈ ‘ದೀಪಾವಳಿ ಧಮಾಕಾ’ದಿಂದ ಬಿಗ್ ಬಾಸ್ ಸ್ಪರ್ಧಿಗಳು ದಂಗಾಗಿದ್ದಾರೆ.






















