ಬೆಂಗಳೂರು: ಖ್ಯಾತ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ ಚಿತ್ರದ ‘ಎದೆ ಸುಡುತಿದೆ ಗಾಯ’ ಎಂಬ ಭಾವಪೂರ್ಣ ವಿಡಿಯೋ ಸಾಂಗ್ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಢ ಭಾವನೆಗಳ ಈ ಹಾಡಿನಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ಖುದ್ದಾಗಿ ಕಾಣಿಸಿಕೊಂಡು ಅಭಿನಯಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಲಿಖಿತ್ ಪ್ರಸಾದ್ ಶೆಟ್ಟಿ ಅವರ ಸಂಗೀತ ಸಂಯೋಜನೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಅವರ ಸಾಹಿತ್ಯವಿರುವ ಈ ಗೀತೆಯನ್ನು ಅನನ್ಯಾ ಭಟ್ ಅವರೇ ಹಾಡಿದ್ದಾರೆ. ಯುವಿಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾಗರಾಜ ಸೋಮಯಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಪ್ರಶಾಂತ್ ಹಿರೇಮಠ್, ಸುಂದರ್ ವೀಣಾ, ಅರವಿಂದ್ ಕುಪ್ಳೀಕರ್ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರವು ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ.






















