ಕನ್ನಡದ ಹಿರಿಯ ಭಾಷಾಶಾಸ್ತ್ರಜ್ಞ, ವಿಮರ್ಶಕ ಡಾ. ಕೆ.ವಿ. ನಾರಾಯಣ ನಿಧನ
ಬೆಂಗಳೂರು: ಕನ್ನಡದ ಖ್ಯಾತ ವಿಮರ್ಶಕ, ಭಾಷಾಶಾಸ್ತ್ರಜ್ಞ, ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವಿ. ನಾರಾಯಣ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಡಾ. ಕೆ.ವಿ. ನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಾರಾಯಣ ಅವರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿರುವ ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಕನ್ನಡ ಭಾಷಾ ಅಧ್ಯಯನಕ್ಕೆ ಮಹತ್ವದ ಕೊಡುಗೆ : 1948ರ ಅಕ್ಟೋಬರ್ 20ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಜನಿಸಿದ ಕೆ.ವಿ. ನಾರಾಯಣ ಅವರು ಕನ್ನಡ ಭಾಷೆ, ಸಾಹಿತ್ಯ ವಿಮರ್ಶೆ ಹಾಗೂ ಸಂಸ್ಕೃತಿ ಅಧ್ಯಯನ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಿದ ಅವರು, 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿ ರಿಜಿಸ್ಟ್ರಾರ್ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು.
ಭಾಷೆಯ ಸ್ವರೂಪ, ಕನ್ನಡದ ಬಳಕೆ, ದ್ವಿಭಾಷಿಕತೆ, ಭಾಷಾ ಸಂಸ್ಕೃತಿ ಹಾಗೂ ಸಾಹಿತ್ಯ ವಿಮರ್ಶೆ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅವರು ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ‘ಕನ್ನಡ ಜಗತ್ತು: ಅರ್ಧ ಶತಮಾನ’, ‘ನಮ್ಮೊಡನೆ ನಮ್ಮ ನುಡಿ’, ‘ಕನ್ನಡ ಶೈಲಿ ಕೈಪಿಡಿ’, ‘ದ್ವಿಭಾಷಿಕತೆ’, ‘ಸ್ಥಳನಾಮಗಳು’ ಮತ್ತು ‘ನುಡಿಗಳ ಅಳಿವು’ ಅವರ ಪ್ರಮುಖ ಕೃತಿಗಳಲ್ಲಿ ಸೇರಿವೆ. ಅನುವಾದ ಕ್ಷೇತ್ರದಲ್ಲಿಯೂ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದರು.
‘ನುಡಿಗಳ ಅಳಿವು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ : ಡಾ. ಕೆ.ವಿ. ನಾರಾಯಣ ಅವರ ‘ನುಡಿಗಳ ಅಳಿವು’ ವಿಮರ್ಶಾ ಕೃತಿಗೆ 2024ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಲ್. ಬಸವರಾಜು ಪ್ರಶಸ್ತಿ ಹಾಗೂ ಡಾ. ಜಿ.ಎಸ್.ಎಸ್. ಪ್ರಶಸ್ತಿಗಳೂ ಅವರಿಗೆ ಸಂದಿದ್ದವು.
ಕನ್ನಡ ಭಾಷೆಯ ಬೆಳವಣಿಗೆ, ಭಾಷಾ ನೀತಿ ಮತ್ತು ಸಾಹಿತ್ಯದ ಕುರಿತು ತಮ್ಮ ವಿದ್ವತ್ಪೂರ್ಣ ಚಿಂತನೆಗಳ ಮೂಲಕ ಹಲವು ತಲೆಮಾರುಗಳ ಓದುಗರು ಹಾಗೂ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದ ನಾರಾಯಣ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಒಬ್ಬ ಹಿರಿಯ ಚಿಂತಕನನ್ನು ಕಳೆದುಕೊಂಡಂತಾಗಿದೆ.
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕೆ.ವಿ. ನಾರಾಯಣ ನಿಧನ
- ಕುಳಗೇರಿ ಕ್ರಾಸ್ನಲ್ಲಿ ಇಂದು ರೈತರ ಪ್ರತಿಭಟನೆ ಇಲ್ಲ: ಎಂದಿನಂತೆ ಬಸ್ ಸಂಚಾರ
- ಅಮೆರಿಕದ ಸೆನೆಟ್ಗೆ ಭಟ್ಕಳದ ಅಳಿಯನ ಐತಿಹಾಸಿಕ ಸಾಧನೆ
- ಚಳ್ಳಕೆರೆಯಲ್ಲಿ ₹35 ಕೋಟಿ ವೆಚ್ಚದ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಂಪುಟ ಅಸ್ತು
- ಉಚಿತ ಗ್ಯಾರೆಂಟಿಗಳ ನೆಪ: ಜನರಿಂದಲೇ ದುಪ್ಪಟ್ಟು ಹಣ ವಸೂಲಿ



















