SK Home Ad
Home ಸುದ್ದಿ ರಾಜ್ಯ ಅಮೆರಿಕದ ಸೆನೆಟ್‌ಗೆ ಭಟ್ಕಳದ ಅಳಿಯನ ಐತಿಹಾಸಿಕ ಸಾಧನೆ

ಅಮೆರಿಕದ ಸೆನೆಟ್‌ಗೆ ಭಟ್ಕಳದ ಅಳಿಯನ ಐತಿಹಾಸಿಕ ಸಾಧನೆ

0
39
ಭಟ್ಕಳದಿಂದ ಅಮೆರಿಕದ ಸೆನೆಟ್‌ವರೆಗೆ: ಅಬ್ದುಲ್ ಎಲ್-ಸಯೀದ್ ಗೆಲುವಿನ ಹಿಂದೆ ಕರ್ನಾಟಕದ ನಂಟು

ಭಟ್ಕಳದ ಮೊಮ್ಮಗನ ಕುಟುಂಬದ ಅಳಿಯ ಈಗ ಅಮೆರಿಕದ ಸೆನೆಟರ್: ಅಬ್ದುಲ್ ಎಲ್-ಸಯೀದ್ ಸಾಧನೆಗೆ ಖಾದರ್ ಅಭಿನಂದನೆ

ಬೆಂಗಳೂರು: ಅಮೆರಿಕದ ಮಿಚಿಗನ್ ರಾಜ್ಯದಿಂದ ನಡೆದ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಅಬ್ದುಲ್ ಎಲ್-ಸಯೀದ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿರುವ ಅವರು, ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯಿಂದ ಅಮೆರಿಕದ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಸಂಭ್ರಮ ಮನೆಮಾಡಿದೆ.

ಭಟ್ಕಳದ ಕುಟುಂಬದೊಂದಿಗೆ ಬೆಸೆದ ಅಮೆರಿಕದ ರಾಜಕೀಯ ಗೆಲುವು : ಅಬ್ದುಲ್ ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬದ ಮೂಲ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿದೆ. ಸಾರಾ ಅವರ ತಾತ ಜುಕಾಕು ಶಂಶುದ್ದೀನ್ ಅವರು ಹಿಂದಿನ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರ ಸಂಪುಟದಲ್ಲಿ ಉಪ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಭಟ್ಕಳದ ಪ್ರಮುಖ ವಕೀಲರಾಗಿಯೂ ಗುರುತಿಸಿಕೊಂಡಿದ್ದರು. ಭಟ್ಕಳದ ಅಭಿವೃದ್ಧಿಗೆ, ವಿಶೇಷವಾಗಿ ಪಟ್ಟಣಕ್ಕೆ ವಿದ್ಯುತ್ ಸೌಲಭ್ಯ ತರುವಲ್ಲಿ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಾರಾ ಜುಕಾಕು ವೃತ್ತಿಯಲ್ಲಿ ಮನೋವೈದ್ಯರಾಗಿದ್ದು, ಅಮೆರಿಕದಲ್ಲಿಯೇ ಜನಿಸಿ ಬೆಳೆದಿದ್ದಾರೆ. ಅವರ ತಂದೆ ಡಾ. ಜುಕಾಕು ತಯೇಬ್ ಅವರು ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು. ಸಾರಾ ಮತ್ತು ಅಬ್ದುಲ್ ಎಲ್-ಸಯೀದ್ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಪರಿಚಯವಾಗಿ 2006ರಲ್ಲಿ ವಿವಾಹವಾಗಿದ್ದರು.

ಆರೋಗ್ಯ ಕ್ಷೇತ್ರದ ಅನುಭವ ಹೊಂದಿರುವ ನಾಯಕ : 42 ವರ್ಷದ ಅಬ್ದುಲ್ ಎಲ್-ಸಯೀದ್ ವೈದ್ಯಕೀಯ ಹಿನ್ನೆಲೆಯ ಜೊತೆಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿಯೂ ಅನುಭವ ಹೊಂದಿದ್ದಾರೆ. ಅವರು ಹಿಂದೆ ಮಿಚಿಗನ್‌ನ ವೇಯ್ನ್ ಕೌಂಟಿಯ ಆರೋಗ್ಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಾರ್ವತ್ರಿಕ ಆರೋಗ್ಯ ಸೇವೆ, ಜನಸಾಮಾನ್ಯರಿಗೆ ಕೈಗೆಟುಕುವ ವೈದ್ಯಕೀಯ ಸೌಲಭ್ಯ ಮತ್ತು ಕಾರ್ಪೊರೇಟ್ ಪ್ರಭಾವದಿಂದ ರಾಜಕೀಯವನ್ನು ಮುಕ್ತಗೊಳಿಸುವ ವಿಚಾರಗಳು ಅವರ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಅವರ ಗೆಲುವು ಕಂಡಿದ್ದು. ಸೆನೆಟರ್-ಇಲೆಕ್ಟ್ ಆಗಿರುವ ಅವರು 2027ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಯು.ಟಿ. ಖಾದರ್ ಅಭಿನಂದನೆ : ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅಬ್ದುಲ್ ಎಲ್-ಸಯೀದ್ ಅವರ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಾಯಕರಾಗಿ ಅವರು ಅಮೆರಿಕದ ಸೆನೆಟ್‌ಗೆ ಅಮೂಲ್ಯ ಅನುಭವ ಹಾಗೂ ಮಹತ್ವದ ಆರೋಗ್ಯ ದೃಷ್ಟಿಕೋನವನ್ನು ತರಲಿದ್ದಾರೆ ಎಂದು ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರಾ ಜುಕಾಕು ಅವರ ಭಟ್ಕಳದ ಕುಟುಂಬದ ಹಿನ್ನೆಲೆಯಿಂದಾಗಿ ಈ ಗೆಲುವು ಭಟ್ಕಳದ ಜನರು, ಕರಾವಳಿ ಪ್ರದೇಶ ಹಾಗೂ ಇಡೀ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ತಿಳಿಸಿದ್ದಾರೆ. ಹೊಸ ಸಾರ್ವಜನಿಕ ಸೇವೆಯ ಅಧ್ಯಾಯದಲ್ಲಿ ಅಬ್ದುಲ್ ಎಲ್-ಸಯೀದ್ ಮತ್ತು ಅವರ ಕುಟುಂಬಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಅಬ್ದುಲ್ ಎಲ್-ಸಯೀದ್ ಅವರ ಗೆಲುವು, ಕರ್ನಾಟಕದ ಭಟ್ಕಳದ ಕುಟುಂಬದ ಹಿನ್ನೆಲೆಯ ಕಾರಣದಿಂದಲೂ ವಿಶೇಷ ಗಮನ ಸೆಳೆದಿದೆ. ಸ್ಥಳೀಯವಾಗಿ ಆರಂಭವಾದ ಒಂದು ಕುಟುಂಬದ ಸಾರ್ವಜನಿಕ ಸೇವೆಯ ಪರಂಪರೆ ಇಂದು ಅಂತರರಾಷ್ಟ್ರೀಯ ರಾಜಕೀಯ ವೇದಿಕೆಯಲ್ಲಿ ಮತ್ತೆ ಸುದ್ದಿಯಾಗಿದೆ.