SK Home Ad
Home ಸುದ್ದಿ ರಾಜ್ಯ ಕನ್ನಡ ಡಿಜಿಟಲ್ ಮಾಧ್ಯಮ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಂಯುಕ್ತ ಕರ್ನಾಟಕ: ಓದುಗರು, ವೀಕ್ಷಕರಿಗೆ ಧನ್ಯವಾದ!

ಕನ್ನಡ ಡಿಜಿಟಲ್ ಮಾಧ್ಯಮ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಂಯುಕ್ತ ಕರ್ನಾಟಕ: ಓದುಗರು, ವೀಕ್ಷಕರಿಗೆ ಧನ್ಯವಾದ!

0
27

ಬೆಂಗಳೂರು: ಕನ್ನಡ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸಂಯುಕ್ತ ಕರ್ನಾಟಕ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಸಂಯುಕ್ತ ಕರ್ನಾಟಕದ ಯೂಟ್ಯೂಬ್ ಚಾನೆಲ್ 1 ಲಕ್ಷ ಚಂದಾದಾರರ ಗಡಿ ತಲುಪುವ ಮೂಲಕ ಯೂಟ್ಯೂಬ್‌ನ ಪ್ರತಿಷ್ಠಿತ ಸಿಲ್ವರ್ ಬಟನ್ ಗೌರವಕ್ಕೆ ಪಾತ್ರವಾಗಿದೆ.

ಕನ್ನಡ ಡಿಜಿಟಲ್ ಮಾಧ್ಯಮ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್‌ನ ಸಿಲ್ವರ್ ಬಟನ್ ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳಾದ ಗುರುರಾಜ ಕರಜಗಿ, ಕಾರ್ಯದರ್ಶಿ ಹರಿಚನ್ನಕೇಶವ ಮತ್ತು ಸಂಪಾದಕರಾದ ಮಹಾಬಲ ಸೀತಾಳಭಾವಿ, ಡಿಜಿಟಲ್‌ ವಿಭಾಗದ ಮುಖ್ಯಸ್ಥರಾದ ಕೃಷ್ಣ ಕುಣಿಗಲ್‌ ಮತ್ತು ಸಂಯುಕ್ತ ಕರ್ನಾಟಕ ಸಿಬ್ಬಂದಿ ಇದ್ದರು.

ಮುದ್ರಣ ಮಾಧ್ಯಮದ ಶ್ರೀಮಂತ ಪರಂಪರೆಯನ್ನು ಡಿಜಿಟಲ್ ಜಗತ್ತಿಗೂ ವಿಸ್ತರಿಸಿರುವ ಸಂಯುಕ್ತ ಕರ್ನಾಟಕ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಡಿಜಿಟಲ್ ಪತ್ರಿಕೋದ್ಯಮದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ನಿಖರ, ವಿಶ್ವಾಸಾರ್ಹ ಹಾಗೂ ಜನಪರ ಸುದ್ದಿಗಳನ್ನು ಓದುಗರಿಗೆ ಮತ್ತು ವೀಕ್ಷಕರಿಗೆ ತಲುಪಿಸುವ ಪ್ರಯತ್ನಕ್ಕೆ ಇದೀಗ ಸಿಲ್ವರ್ ಬಟನ್ ಗೌರವ ಮತ್ತಷ್ಟು ಮೆರುಗು ನೀಡಿದೆ.

ಈ ಸಾಧನೆಯ ಹಿಂದೆ ಸಂಯುಕ್ತ ಕರ್ನಾಟಕದ ಸಮಸ್ತ ಸಿಬ್ಬಂದಿ, ಸಂಪಾದಕೀಯ ಮತ್ತು ಡಿಜಿಟಲ್ ತಂಡದ ಪರಿಶ್ರಮದ ಜತೆಗೆ ಓದುಗರು ಹಾಗೂ ವೀಕ್ಷಕರ ಪ್ರೀತಿ, ವಿಶ್ವಾಸ ಮತ್ತು ನಿರಂತರ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ.

ಈ ಮಹತ್ವದ ಸಾಧನೆಗೆ ಕೈಜೋಡಿಸಿದ ಸಮಸ್ತ ಸಂಯುಕ್ತ ಕರ್ನಾಟಕದ ಓದುಗರು, ಯೂಟ್ಯೂಬ್ ವೀಕ್ಷಕರು ಹಾಗೂ ಚಂದಾದಾರರಿಗೆ ಸಂಸ್ಥೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ. ಮುಂದೆಯೂ ಇದೇ ವಿಶ್ವಾಸದೊಂದಿಗೆ ಇನ್ನಷ್ಟು ಗುಣಮಟ್ಟದ ಸುದ್ದಿಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ತಲುಪಿಸುವ ಸಂಕಲ್ಪವನ್ನು ಸಂಯುಕ್ತ ಕರ್ನಾಟಕ ಹೊಂದಿದೆ.