ಬಾಳೆಕುದ್ರು ಮಠಕ್ಕೆ ಬೀಗ; ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಪೊಲೀಸ್ ದೂರು
ಸಂ.ಕ. ಸಮಾಚಾರ ಉಡುಪಿ : ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ಪರಾರಿಯಾಗಿದ್ದು ಭಕ್ತರು ಆತಂಕಗೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ಮತ್ತು ಕೋಟ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಬುಧವಾರ ಸಂಜೆಯ ನಂತರ ಮಠಕ್ಕೆ ಬೀಗ ಹಾಕಲಾಗಿದೆ. ಅದೇ ವೇಳೆ ಮಠದ ವಿಗ್ರಹಗಳನ್ನು ಮಾರಾಟ ಮಾಡಿರುವ ಬಗ್ಗೆಯೂ ಸಂದೇಹವಿದ್ದು, ಆ ಕುರಿತೂ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ಹಂಗಾರಕಟ್ಟೆ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ವಿರುದ್ಧ ಅನೇಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿ ಸದಸ್ಯರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಮಠದಲ್ಲಿ ಈ ಹಿಂದಿನ ನೃಸಿಂಹಾಶ್ರಮ ಸ್ವಾಮೀಜಿ ಆಡಳಿತಾವಧಿಯಲ್ಲಿ ದೇವಸ್ಥಾನದ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆದವು. ಈಗಿನ ಸ್ವಾಮೀಜಿ ಅವಧಿಯಲ್ಲಿ ಇದು ಎಲ್ಲೆ ಮೀರಿದ್ದು, ಮಠದ ಸಂಪ್ರದಾಯಕ್ಕೆ ವಿರುದ್ಧವಾಗಿ ವಿವಿಧ ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದರು.
ಇದೀಗ ಭಕ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅಗತ್ಯ ಕ್ರಮಕ್ಕೆ ಮನವಿ ಮಾಡಿದ್ದಾರೆ.






















