ಬೆಂಗಳೂರು: “ಸ್ಟಿಂಗ್ ಪ್ರಕರಣದಲ್ಲಿ ಕಥೆ, ಚಿತ್ರಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಕುಮಾರಸ್ವಾಮಿ ಅವರದ್ದೇ ಆಗಿದೆ. ಸ್ಟಿಂಗ್ ವಿಡಿಯೋ ಬಿಡುಗಡೆ ಮಾಡಿದವರು ಕುಮಾರಸ್ವಾಮಿ ಜೊತೆಗೆ ಕೆಲಸ ಮಾಡುವವರೇ ಆಗಿದ್ದಾರೆ” ಎಂದು ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಮೌರ್ಯ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಳೆದ ಒಂದು ತಿಂಗಳಿನಿಂದ ಮಾಧ್ಯಮಗೋಷ್ಠಿಗಳ ಮೂಲಕ ಕರ್ನಾಟಕದ ಮಾನ ಮರ್ಯಾದೆಯನ್ನು ದೇಶದಲ್ಲಿ ಹರಾಜು ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಸುಪಾರಿ ನೀಡಿ ರಾಜ್ಯ ಸರ್ಕಾರದ ತೇಜೋವಧೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನ: “ಇದರ ಹಿಂದಿರುವ ಹುನ್ನಾರವನ್ನು ತನಿಖಾ ತಂಡ ಮಾಡಲಿದೆ. ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ತೇಜೋವಧೆ ಮೂಲಕ ಕಾಂಗ್ರೆಸ್ ವಿರುದ್ಧ ಅಹಿಂದ ಮತವನ್ನು ತಿರುಗಿಸುವುದು, ಡಿ.ಕೆ. ಶಿವಕುಮಾರ್ ಅವರ ಖ್ಯಾತಿ ಸಹಿಸಲಾಗದೇ 2028ರ ಚುನಾವಣೆ ಎದುರಿಸುವುದು. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತಂದು 2028ರಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹಾಗೂ ಸುಳ್ಳಿನ ಮೂಲಕ ಜನರನ್ನು ನಂಬಿಸುವ ಪ್ರಯತ್ನ. ಈ ನಾಲ್ಕು ವಿಚಾರಗಳನ್ನು ಒಂದೇ ಸಮಯದಲ್ಲಿ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.
ಮೋದಿಗೆ ಕುಮಾರಸ್ವಾಮಿ ಆಶ್ವಾಸನೆ: “ಆಗಸ್ಟ್ 27, 2026ರಂದು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸ್ಟಿಂಗ್ ವಿಚಾರವನ್ನು ಮೋದಿ ಅವರಿಗೆ ತೋರಿಸಿ, ಇದೊಂದು ಸ್ಟಿಂಗ್ ಪ್ರಕರಣದಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ರಚಿಸುತ್ತೇವೆ. 2029ರಲ್ಲಿ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನಿಮ್ಮನ್ನು ಮತ್ತೊಮ್ಮೆ ಪ್ರಧಾನಿ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಮೋದಿ ಅವರು ಈ ಅಪ್ಪ ಮಗನಿಗೆ ‘ಗೋ ಹೆಡ್’ ಎಂದು ಅನುಮತಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿರುವ ಕುರಿತ ಆಡಿಯೋವನ್ನು ಮುಂದಿನ ದಿನಗಳಲ್ಲಿ ತನಿಖೆ ಬಳಿಕ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.
ಕುಮಾರಸ್ವಾಮಿ ಸಿಬ್ಬಂದಿಯಿಂದಲೇ ವಿಡಿಯೋ ಅಪ್ಲೋಡ್: “ನಿನ್ನೆ ಪೊಲೀಸ್ ಆಯುಕ್ತರು ತನಿಖೆಯ ವರದಿ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಜತೆ ಕೆಲಸ ಮಾಡುತ್ತಿರುವ ರಿತೇಶ್ ಪಾಂಡೆ, ವಿನೋದ್ ಶರ್ಮಾ, ಪಿಆರ್ಒ ಪ್ರಜ್ವಲ್ ಪ್ರಸಾದ್ ಎಂಬುವವರು ಇದರ ಹಿಂದೆ ಇದ್ದಾರೆ. ಪ್ರಜ್ವಲ್ ಪ್ರಸಾದ್ ಈ ಹಿಂದೆ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದವರು. ಈಗ ಆ ವಾಹಿನಿ ಇಲ್ಲ. ಅವರು ಸ್ಟಿಂಗ್ ಆಪರೇಷನ್ ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಸ್ಟಿಂಗ್ ಮಾಡುವುದರಲ್ಲಿ ನಿಪುಣರಾಗಿದ್ದರು” ಎಂದರು.
“ಈ ಮೂವರಲ್ಲಿ ಒಬ್ಬರಿಗೆ ಮಾಸಿಕ 2 ಲಕ್ಷ ಹಾಗೂ ಇತರೆ ಸೌಲಭ್ಯ, ಉಳಿದ ಇಬ್ಬರಿಗೆ ತಲಾ 1.50 ಲಕ್ಷ ಹಾಗೂ ಇತರೆ ಸೌಲಭ್ಯ ವೇತನ ನೀಡಲಾಗುತ್ತಿತ್ತು. ಬಾಗೇಪಲ್ಲಿ ಪ್ರಶಾಂತ್ ಎಂಬಾತ ಈ ಹಿಂದೆ ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರ ಜತೆ ಕೆಲಸ ಮಾಡುತ್ತಿದ್ದ. ಈ ಸ್ಟಿಂಗ್ ವಿಡಿಯೋವನ್ನು 2023 ಫೆ. 25ರಂದು ಸಿದ್ದರಾಮಯ್ಯ ಅವರ ಮನೆಯಲ್ಲಿ ಯಾವುದೋ ಮಹಿಳೆ ಕರೆದುಕೊಂಡು ಬಂದು ಮಾತನಾಡಿರುವುದು ಪ್ರಶಾಂತ್. ಆ ಸ್ಟಿಂಗ್ ವಿಡಿಯೋ ಕೆ.ಜೆ ಕೃಷ್ಣಾ ಎಂಬ ಮತ್ತೊಬ್ಬ ಪತ್ರಕರ್ತರು ಹಂಚಿಕೊಂಡಿದ್ದರು. ಈ ಪ್ರಶಾಂತ್ ಎಂಬಾತ ಕುಮಾರಸ್ವಾಮಿ ಅವರಿಗೆ ಆಪ್ತನಾಗಿದ್ದ. ಈತನೇ ಕುಮಾರಸ್ವಾಮಿ ಅವರಿಗೆ ಈ ಸ್ಟಿಂಗ್ ವಿಡಿಯೋ ನೀಡಿದ್ದಾನೆ. ಕುಮಾರಸ್ವಾಮಿ ಅವರಿಗೆ ನೇರವಾಗಿ ನೀಡದೇ ಇದ್ದರೂ ಪ್ರಜ್ವಲ್ ಪ್ರಸಾದ್ ಅವರ ಮೂಲಕ ನೀಡಿರುತ್ತಾರೆ. ಆನಂತರ ಕಥೆ, ಚಿತ್ರಕತೆ, ನಿರ್ದೇಶನವನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿದೆ” ಎಂದರು.
ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ವಿಡಿಯೋ ಅಪ್ಲೋಡ್: “ಪ್ರಜ್ವಲ್ ಪಾಂಡೆ ಅವರು ರಿತೇಶ್ ಪಾಂಡೆ ಹಾಗೂ ವಿನೋದ್ ಶರ್ಮಾ ಅವರಿಂದ ಎರಡು ಮೊಬೈಲ್ ಖರೀದಿಸಿ ಅದೇ ಅಂಗಡಿಯಲ್ಲಿ ಇಂಟರ್ನೆಟ್ ಸಂಪರ್ಕ ಪಡೆದಿರುವಾಗ ಸಿಸಿಬಿ ಪೊಲೀಸರಿಗೆ ಐಎಂಎ ಸಂಖ್ಯೆ ಸಿಕ್ಕಿದೆ. ನಂತರ ಆ ಮೊಬೈಲ್ಗಳನ್ನು ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಪ್ಲೋಡ್ ಮಾಡಲಾಗಿದೆ. ಇದರ ಸಮಯ ಎಲ್ಲವೂ ಪೊಲೀಸ್ ತನಿಖಾಧಿಕಾರಿಗಳ ಬಳಿ ಇದೆ. ರಿತೇಶ್ ಪಾಂಡೆ ಅವರನ್ನು 7-8 ಬಾರಿ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದು, ಆತ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ವಿಡಿಯೋ ಅಪ್ಲೋಡ್ ಮಾಡುವಾಗ ಕುಮಾರಸ್ವಾಮಿ ಅವರು ಅಲ್ಲೇ ಉಪಸ್ಥಿತರಿದ್ದರು ಎಂದು ಆತನ ಹೇಳಿಕೆಯಲ್ಲಿ ದಾಖಲಾಗಿದೆ” ಎಂದರು.
29,30,000 ರೂ. ಹಣಕಾಸಿನ ವ್ಯವಹಾರ: “ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊಬೈಲ್ ಖರೀದಿಗೆ ಬಳಸಲಾದ 50 ಸಾವಿರ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಲಾಗಿದ್ದು, ಪ್ರಜ್ವಲ್ ಪ್ರಸಾದ್ ಹಾಗೂ ರಿತೇಶ್ ಪಾಂಡೆ, ವಿನೋದ್ ಶರ್ಮಾ ಅವರ ನಡುವೆ ನಂತರ 3 ದಿನಾಂಕಗಳಲ್ಲಿ 29,30,000 ಹಣಕಾಸಿನ ವ್ಯವಹಾರವಾಗಿದೆ. ಪ್ರಜ್ವಲ್ ಪ್ರಸಾದ್ ಅವರನ್ನು ಹಿಡಿದರೆ ಈ ಹಣ ಎಲ್ಲಿಂದ ಬಂತು, ಯಾಕೆ ಬಂತು ಎಂಬ ಮಾಹಿತಿ ಸಿಗುತ್ತದೆ. ಈ ಮೂವರು ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣದ ಕಂಟೆಟ್ ಕ್ರಿಯೇಟರ್ಗಳಾಗಿ ಕೆಲಸ ಮಾಡುವವರು” ಎಂದರು.
ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ: “ಕುಮಾರಸ್ವಾಮಿ ಅವರು ಸಿನಿಮಾ ರಂಗದಲ್ಲಿದ್ದವರು. ಕೆಟ್ಟ ಕಥೆಯನ್ನು ಜನರಿಗೆ ಒಪ್ಪುವಂತೆ ಬದಲಿಸುವ ಕಲೆ ಅವರಿಗಿದೆ. ಅವರ ಕಲೆ ಬೇರೆ ಸಿನಿಮಾ ನಿರ್ದೇಶಕರಿಗೂ ಇಲ್ಲ. ಹೀಗಾಗಿ ಅವರು ಈ ಪ್ರಕರಣದಲ್ಲಿ ನರೇಟಿವ್ ರಚಿಸಲು ಆರಂಭಿಸಿದರು. ಕುಮಾರಸ್ವಾಮಿ ಅವರು ಇದುವರೆಗೂ ಈ ಪ್ರಕರಣದಲ್ಲಿ ಒಂಬತ್ತು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಮೊದಲ ಮಾಧ್ಯಮಗೋಷ್ಠಿಯಲ್ಲಿ ನೈಸ್ ಪ್ರಕರಣ ಮರೆಮಾಚಲು ಸ್ಟಿಂಗ್ ಪ್ರಕರಣ ತಂದಿದ್ದಾರೆ ಎಂದು ಹೇಳಿದರು. ನಂತರ ಡಿ.ಕೆ. ಶಿವಕುಮಾರ್ ಅವರು ಶಾಂಗ್ರಿಲಾ ಹೊಟೇಲ್ನಲ್ಲಿ ಸ್ಟಿಂಗ್ ಮಾಡುವವರನ್ನು ಭೇಟಿ ಮಾಡಿದ್ದರು ಎಂದು ನರೇಟಿವ್ ಸೆಟ್ ಮಾಡಿದರು. ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದವರ ವಿರುದ್ಧ ತನಿಖೆ ಆಗಬೇಕು, ಬಂಧಿಸಬೇಕು ಎಂದು ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರು. ಆಮೂಲಕ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ ಹರಿಸಿದರು. 2023ರ ನಂತರ ಸಿದ್ದರಾಮಯ್ಯ ಅವರು ಹಾಗೂ ಅವರ ಮಗನ ವಿರುದ್ಧ ಕುಮಾಸ್ವಾಮಿ ಅವರು ಇನ್ನಿಲ್ಲದ ಟೀಕೆ ಮಾಡಿದರು. ಈಗ ಏಕಾಏಕಿ ಪ್ರೀತಿ ತೋರಿದರು” ಎಂದು ವಿವರಿಸಿದರು.
“ನಂತರ ನೈಜ್ಯ ಅಪರಾಧಿ ಬಿಟ್ಟು ದಳದ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ ಎಂದರು. ನಂತರ ಪ್ರಿಯಾಂಕ್ ಖರ್ಗೆ ವಿರುದ್ಧ ವೈಯಕ್ತಿಕ ದಾಳಿ ಮಾಡಿ ಬಲಿತ ದಲಿತ ಎಂದು ಟೀಕಿಸಿದರು. ತಮ್ಮ ವಿರುದ್ಧ ತಿಗುರುತ್ತದೆ ಎಂಬ ವಿಚಾರ ತಿಳಿದ ತಕ್ಷಣ ಡಿಜಿಪಿ ಕಚೇರಿಗೆ ಪಾದಯಾತ್ರೆ ಮಾಡಿ ಪೊಲೀಸರ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದರು. ನಂತರ ಈ ಸ್ಟಿಂಗ್ ವಿಡಿಯೋ ಬಹಿರಂಗ ಮಾಡಿದ್ದು ಸಚಿವ ಜಮೀರ್ ಅಹ್ಮದ್ ಎಂದರು. ನಂತರ ಸಿದ್ದರಾಮಯ್ಯ ವಿರುದ್ಧ ಖರ್ಗೆ ಕುಟುಂಬ ಪಿತೂರಿ ಮಾಡಿದೆ ಎಂದರು. ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದರು. ಕೊನೆಯದಾಗಿ ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 6 ಲಕ್ಷ ಹಣ ವರ್ಗಾವಣೆ ಮಾಡಿದರೆ ಐಟಿ ಇಡಿಯವರು ಬರುತ್ತಾರೆ. ಇನ್ನು 600 ಕೋಟಿ ವೆಚ್ಚ ಮಾಡಬೇಕು ಎಂದರೆ ಹೇಗೆ? ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಐಟಿಗೋ, ಇಡಿಗೋ ದೂರು ನೀಡಿದ್ದರೆ ತನಿಖೆ ಮಾಡುತ್ತಿದ್ದವು. ಹೀಗೆ ಸುಳ್ಳು ಹೇಳುವ ಪ್ರವೃತ್ತಿ ಹೊಂದಿರುವ ವ್ಯಕ್ತಿ ಕುಮಾರಸ್ವಾಮಿ” ಎಂದು ಕಿಡಿಕಾರಿದರು.
“ಪೊಲೀಸ್ ಆಯುಕ್ತರು ಪ್ರಕರಣದ ಪ್ರಾಥಮಿಕ ತನಿಖೆಯ ಕುರಿತು ತಾಂತ್ರಿಕ ಸಾಕ್ಷ್ಯಾಧಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ. ಅವರು ನಿಮ್ಮಂತೆ ಹಿಟ್ ಅಂಡ್ ರನ್ ಮಾಡುವುದಿಲ್ಲ. ಪ್ರಕರಣದ ಮಾಹಿತಿ ಕೊಟ್ಟ ಐಪಿಎಸ್ ಅಧಿಕಾರಿಯನ್ನು ಹೆಡ್ ಕ್ಲರ್ಕ್ ಎಂದು ನಿಂದಿಸಿದ್ದಾರೆ. ಜಾಗ ಉಳಿಸಿಕೊಳ್ಳಲು ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ಯಾರು ಮಾತನಾಡಿದರೂ ನೀವು ಅವರ ವಿರುದ್ಧ ಏನು ಬೇಕಾದರೂ ಮಾತನಾಡುತ್ತೀರಿ. ನನ್ನ ಮುಟ್ಟಿ ನೋಡಿ ಎಂದು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತೀರಿ. ಒಂದು ವೇಳೆ ನಾಳೆ ಅವರು ನಿಮ್ಮನ್ನು ಮುಟ್ಟುತ್ತಾರೆ ಎಂದು ನಿಮಗೆ ಹೇಗೆ ಗೊತ್ತು? ಕಾನೂನು ಅಡಿಯಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ. ಕುಮಾರಸ್ವಾಮಿ ಆಗಲಿ ಬೇರೆ ಯಾರೇ ಆಗಲಿ, ಬಿಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಪ್ರಯತ್ನ ಮಾಡಿದವರು ಯಾರೇ ಆಗಿರಲಿ, ಕಾಂಗ್ರೆಸ್ನವರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು ಎಂಬುದು ನಮ್ಮ ಆಗ್ರಹ” ಎಂದರು.
“ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ ಕರ್ನಾಟಕದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ದೇಶದ 12 ಅಧಿಕಾರಿಗಳಿಗೆ ನೀಡಿದ ಪ್ರಶಸ್ತಿಯಲ್ಲಿ ಕರ್ನಾಟಕದ ಮೂವರು ಅಧಿಕಾರಿಗಳಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ನಿರ್ಭೀತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪೊಲೀಸರ ತನಿಖಾ ಸಾಮರ್ಥ್ಯವನ್ನು ಪ್ರಶ್ನಿಸುವುದು ಸರಿಯಲ್ಲ” ಎಂದು ಹೇಳಿದರು.
“ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಏನಾದರೂ ಒಂದು ರೂಪಾಯಿ ಅನುದಾನ ಅಥವಾ ನೆರವು ತರುವ ಕೆಲಸ ಮಾಡಿದ್ದಾರೆಯೇ? ರಾಜ್ಯದ ಅಭಿವೃದ್ಧಿ ವಿಚಾರವಾಗಿ ಮಾತನಾಡುವ ಬದಲು ಪ್ರತಿದಿನ ಡಿ.ಕೆ. ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಅವರ ರಾಜಕೀಯ ವರ್ಚಸ್ಸು ಕುಗ್ಗಿಸುವುದೇ ನಿಮ್ಮ ಉದ್ದೇಶವೇ” ಎಂದು ಪ್ರಶ್ನಿಸಿದರು.
“ಹಿಂದೆ 30 ದಿನಗಳಲ್ಲಿ ಇಂಗ್ಲಿಷ್ ಕಲಿಯಿರಿ ಎಂಬ ಪುಸ್ತಕಗಳನ್ನು ಓದುತ್ತಿದ್ದೆವು. ಈಗ ಕುಮಾರಸ್ವಾಮಿ ಅವರು 30 ದಿನಗಳಲ್ಲಿ ಸುಳ್ಳು ಹೇಳುವುದು ಹೇಗೆ, ರಾಜ್ಯವನ್ನು ಆಳುವುದು ಹೇಗೆ, ಮನೆ ಮುರಿಯುವುದು ಹೇಗೆ ಎಂಬ ಪುಸ್ತಕ ಬರೆದಿದ್ದಾರೇನೋ ಎಂಬಂತಿದೆ. ಇಂತಹ ಪುಸ್ತಕ ಬಿಡುಗಡೆ ಮಾಡುವ ಬದಲು ರಾಜ್ಯದ ಜನರಿಗೆ ಉಪಯೋಗವಾಗುವ ವಿಚಾರಗಳ ಬಗ್ಗೆ ಮಾತನಾಡಲಿ. ದಿನ ಬೆಳಗಾದರೆ ಕುಮಾರಸ್ವಾಮಿ ಏನು ಹೇಳುತ್ತಾರೆ ಎಂದು ಮಾಧ್ಯಮಗಳಲ್ಲಿ ಗಮನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಂದು ದಿನ ಒಂದೊಂದು ಆರೋಪ ಮಾಡುತ್ತಾ, ಹೊಸ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಆರೋಪಗಳ ಮೂಲಕ ನಾಯಕರ ತೇಜೋವಧೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ತಿರುಗೇಟು ನೀಡಿದರು.
“ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ನವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅವರು ಯಾವ ಸಂದರ್ಭದಲ್ಲಿ, ಯಾವ ಪ್ರಶ್ನೆಗೆ ಉತ್ತರವಾಗಿ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮಾಧ್ಯಮದವರು ಕಾಂಗ್ರೆಸ್ನ ಮಹಿಳೆಯೊಬ್ಬರ ಹೆಸರು ಪ್ರಸ್ತಾಪಿಸಿದಾಗ, ಮಂಗಳೂರಿನ ಕೃಪಾ ಆಳ್ವಾ ಅವರ ಹೆಸರು ನಮಗೂ ಗೊತ್ತಿದೆ, ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಯತೀಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಅವರೂ ಸ್ಟಿಂಗ್ ಆಪರೇಷನ್ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ನವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ” ಎಂದು ಹೇಳಿದರು.
“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 2011ರಲ್ಲಿ ಸ್ಟಿಂಗ್ ಆಪರೇಷನ್ ನಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಮೂಲ ವಿಡಿಯೊವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಸಿದ್ದರಾಮಯ್ಯ ಅವರು ಅದರಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ವಿಡಿಯೊ ಅಥವಾ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ. ಸುಮ್ಮನೆ ಆರೋಪ ಮಾಡುವ ಬದಲು ದಾಖಲೆಗಳನ್ನು ಜನರ ಮುಂದಿಡಲಿ” ಎಂದರು.
“2028ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದೀರಾ? ಹೆಸರು ಬರೆದಿಟ್ಟುಕೊಂಡು ಅಧಿಕಾರಿವರ್ಗವನ್ನು ಆಚೆಗೆ ಕಳುಹಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಮೇಲೆ ಧಮಕಿ ಹಾಕುವ ಕೆಲಸ ಮಾಡಬೇಡಿ. ಇದರ ಆಧಾರದ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು. ನಮ್ಮ ಸರ್ಕಾರ ಆ ಕೆಲಸ ಮಾಡುತ್ತಿಲ್ಲ. ಈ ವಿಚಾರವಾಗಿ ನಮ್ಮ ಕಾರ್ಯಕರ್ತರಿಗೆ ಬೇಸರವಿದೆ” ಎಂದರು.



















