ಬೆಂಗಳೂರು: ಚಾಮರಾಜ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಿಯಲ್ ಫೈಟರ್ಸ್’ ಕನ್ನಡ ಚಿತ್ರದ ಅಧಿಕೃತ ಟೀಸರ್ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೈಜ ಸಾಹಸ ದೃಶ್ಯಗಳು ಹಾಗೂ ವಿದ್ಯಾರ್ಥಿ ಕಲಾವಿದರ ಕಠಿಣ ಶ್ರಮದೊಂದಿಗೆ ಮೂಡಿಬರುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಶಾಸಕ ಕೆ. ಗೋಪಾಲಯ್ಯ, ನಟ ‘ನೆನಪಿರಲಿ’ ಪ್ರೇಮ್, ಉದ್ಯಮಿ ಎಚ್.ಎಸ್. ರಾಘವೇಂದ್ರ ಶೆಟ್ರು ಹಾಗೂ ಖ್ಯಾತ ರಾಕ್ ಕ್ಲೈಂಬರ್ ಜ್ಯೋತಿರಾಜ್ (ಕೋತಿರಾಜ್) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ‘ನೆನಪಿರಲಿ’ ಪ್ರೇಮ್, ನಿರ್ದೇಶಕ ಚಾಮರಾಜ್ ಮಾಸ್ಟರ್ ಅವರ ತರಬೇತಿ ಮತ್ತು ಸ್ಪೂರ್ತಿದಾಯಕ ಗುಣಗಳನ್ನು ಕೊಂಡಾಡಿದರು. ತಾವು ಹಾಗೂ ತಮ್ಮ ಮಕ್ಕಳು ಅವರ ಶಿಷ್ಯಂದಿರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದ ಪ್ರೇಮ್, ಹಳೆಯ ದಿನಗಳ ತಾಲೀಮುಗಳನ್ನು ನೆನಪಿಸಿಕೊಂಡರು.
ಡಾ. ಚಾಮರಾಜ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾದಲ್ಲಿ ಯಾವುದೇ ರೋಪ್ ಅಥವಾ ರಕ್ಷಣಾ ಸಾಧನಗಳನ್ನು ಬಳಸದೆ, ಕೇವಲ ನೈಜ ಕೌಶಲಗಳಿಂದ ಅಪಾಯಕಾರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿರುವುದು ವಿಶೇಷ. ಡಾ. ಎನ್. ಚಂದ್ರಶೇಖರ್, ಜ್ಯೋತಿರಾಜ್, ಡಾ. ವಿ. ನಾಗೇಂದ್ರ ಪ್ರಸಾದ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದು, ಅನಿಲ್, ಅರುಣ್ ರೋಹಿತ್, ರಾಕ್ ಶ್ರೀ, ನೇತ್ರಾ ಹಾಗೂ ಶ್ರೀಹರ್ಷ ನೈಜ ಸ್ಟಂಟ್ಗಳ ಮೂಲಕ ಗಮನ ಸೆಳೆದಿದ್ದಾರೆ. ಸತೀಶ್ ಆರ್ಯನ್ ಸಂಗೀತ ಸಂಯೋಜನೆ ಹಾಗೂ ವಿಘ್ನೇಶ್ ಮಲೈಚಾಮಿ, ಯುಜೀನ್ ಡಿಸೋಜಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ.






















