ವಿ. ಎಸ್. ಮಧುಕರ್, ಮಂಗಳೂರು
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯಂತ್ರಗಳು ಯೋಚಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ; ಆದರೆ ಕೃತಕ ಬುದ್ಧಿಮತ್ತೆ (ಎ.ಐ.) ಕನ್ನಡದ ನುಡಿಯ ಸೊಗಡನ್ನು, ಅದರ ಆಳವಾದ ತಾತ್ತ್ವಿಕ ಪರಂಪರೆಯನ್ನು ಗ್ರಹಿಸಲು ಹರಸಾಹಸಪಡಬೇಕಿದೆ. ಜಾಗತಿಕ ತಂತ್ರಜ್ಞಾನದ ಭರಾಟೆಯಲ್ಲಿ ಇಂಗ್ಲಿಷಿಗೆ ಸಿಕ್ಕಿರುವಷ್ಟು ದೈತ್ಯ ಅವಕಾಶಗಳ ವಿಸ್ತಾರ ಕನ್ನಡಕ್ಕೆ ಇನ್ನೂ ದಕ್ಕಿಲ್ಲ. ಕನ್ನಡದಲ್ಲಿ ಲಭ್ಯವಿರುವ ಡಿಜಿಟಲ್ ಬರಹಗಳ ಪ್ರಮಾಣವೂ ಸೀಮಿತವಾಗಿರುವುದರಿಂದ; ನಮ್ಮ ಸಾಹಿತ್ಯ, ಸಂಶೋಧನೆ ಮತ್ತು ಸ್ಥಳೀಯ ಜ್ಞಾನಪರಂಪರೆಯನ್ನು ಅಕ್ಷರಶಃ ಗ್ರಹಿಸಿ ಬಳಸಿಕೊಳ್ಳುವ ಎ.ಐ. ಮಾದರಿಗಳನ್ನು ರೂಪಿಸುವುದು ಸವಾಲಿನ ಹಾದಿಯಾಗಿದೆ.
ಕನ್ನಡದ ವಿಶಿಷ್ಟ ಲಿಪಿ, ಸಂಕೀರ್ಣ ಒತ್ತಕ್ಷರಗಳು, ಪ್ರಾದೇಶಿಕ ಉಚ್ಚಾರಣೆಗಳು ಮತ್ತು ಸಂದರ್ಭಕ್ಕೆ ತಕ್ಕಂತೆ ಅರ್ಥ ಬದಲಾಗುವ ಪದಗಳ ಜಾಲವನ್ನು ಯಂತ್ರಕ್ಕೆ ಕಲಿಸುವುದು ಸುಲಭದ ಕೆಲಸವಲ್ಲ. ಉದಾಹರಣೆಗೆ, `ಕೈ ಹಾಕು’ ಎಂಬ ಪದಪ್ರಯೋಗವನ್ನೇ ತೆಗೆದುಕೊಳ್ಳಿ. ಒಂದು ಸಂದರ್ಭದಲ್ಲಿ ಅದು ನಿರ್ದಿಷ್ಟ ಕೆಲಸ ಆರಂಭಿಸುವುದನ್ನು ಸೂಚಿಸಿದರೆ, ಮತ್ತೊಂದು ಸಂದರ್ಭದಲ್ಲಿ ಅನಗತ್ಯವಾಗಿ ಮಧ್ಯ ಪ್ರವೇಶಿಸುವುದನ್ನು ಸೂಚಿಸುತ್ತದೆ. ಪದಗಳ ನಿಘಂಟು ಅರ್ಥ ತಿಳಿದಿದ್ದರೆ ಮಾತ್ರ ಸಾಲದು; ಅವು ಬಳಕೆಯಾಗಿರುವ ಒಟ್ಟಾರೆ ಸಂದರ್ಭದ ಹೂರಣವೂ ಯಂತ್ರಕ್ಕೆ ಅರ್ಥವಾಗಬೇಕಷ್ಟೇ.
ತಾಂತ್ರಿಕ ಬೆಂಬಲ: ಭಾರತ ಸರ್ಕಾರದ ಭಾಷಿಣಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಎಐ ಫೌಂಡ್ರಿ ಪ್ರಾಯೋಜಿತ ಆರ್ಟ್ಪಾರ್ಕ್ ಸಹಯೋಗದ ಪ್ರಾಜೆಕ್ಟ್ ವಾಣಿ ಮುಂತಾದ ಮಹತ್ತಾಕಾಂಕ್ಷಿ ಯೋಜನೆಗಳು ಡಿಜಿಟಲ್ ಜಗತ್ತಿನಲ್ಲಿ ಭಾರತೀಯ ಭಾಷೆಗಳ ಬಳಕೆಯನ್ನು ವಿಸ್ತರಿಸುವ ದಿಟ್ಟ ಹೆಜ್ಜೆ ಇಡುತ್ತಿವೆ. ಪ್ರಾಜೆಕ್ಟ್ ವಾಣಿಯಲ್ಲಿ ನೂರಕ್ಕೂ ಹೆಚ್ಚು ಭಾಷೆಗಳಿಗೆ ಸಂಬಂಧಿಸಿದ ಧ್ವನಿ ದತ್ತಾಂಶವನ್ನು ಸಂಗ್ರಹಿಸಿದ್ದು, ಇದು ಭಾಷಾ ತಂತ್ರಜ್ಞಾನಕ್ಕೆ ಬಲ ತುಂಬುತ್ತಿದೆ.
ಕನ್ನಡದ ಜ್ಞಾನ ಕಲಿಸುವ ಹಾದಿ: ಮೊದಲಿಗೆ ತಾಳೆಗರಿ ಹಸ್ತಪ್ರತಿಗಳು, ಹಳೆಯ ಪುಸ್ತಕಗಳು, ಅಪರೂಪದ ಪತ್ರಿಕೆಗಳು ಮತ್ತು ಶಾಸನಗಳನ್ನು ಅಧಿಕೃತವಾಗಿ ಡಿಜಿಟಲ್ ರೂಪಕ್ಕೆ ತರಬೇಕು. ಅವುಗಳಲ್ಲಿರುವ ಲಿಪಿಯನ್ನು ಯಂತ್ರ ಓದಬಲ್ಲ ನಿರ್ದಿಷ್ಟ ಪಠ್ಯವಾಗಿ ಪರಿವರ್ತಿಸಬೇಕು. ಗಾದೆ, ವಚನ, ಜನಪದ ಗೀತೆಗಳು ಮತ್ತು ಪಾರಂಪರಿಕ ಜ್ಞಾನವನ್ನು ಸಂಗ್ರಹಿಸುವಾಗ ಅವುಗಳ ಧ್ವನ್ಯರ್ಥ, ಐತಿಹಾಸಿಕ ಹಿನ್ನೆಲೆ ಹಾಗೂ ವಿಶ್ವಾಸಾರ್ಹ ವ್ಯಾಖ್ಯಾನಗಳನ್ನೂ ದಾಖಲಿಸುವುದು ಅತ್ಯಂತ ಆವಶ್ಯಕ. ಧಾರವಾಡ, ಮೈಸೂರು, ಮಂಗಳೂರು, ಉತ್ತರ ಕನ್ನಡದಂತಹ ಪ್ರಾದೇಶಿಕ ಪ್ರದೇಶಗಳ ವಿಶಿಷ್ಟ ಆಡುಮಾತುಗಳು, ಸ್ಥಳೀಯ ಪದಪ್ರಯೋಗಗಳು ಹಾಗೂ ಹಿರಿಯರ ಅನುಭವದ ಜ್ಞಾನವನ್ನೂ ಧ್ವನಿ-ಬರಹಗಳ ಮೂಲಕ ಉಳಿಸಿ ಬೆಳೆಸಬೇಕು.
ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಭಾಷೆ, ಸಾಹಿತ್ಯ, ಇತಿಹಾಸ, ಕೃಷಿ, ಕಲೆ ಮತ್ತು ಪಾರಂಪರಿಕ ಕೌಶಲ ಜ್ಞಾನಗಳಂತಹ ವಿಭಾಗಗಳಲ್ಲಿ ಕ್ರಮಬದ್ಧವಾಗಿ ಜೋಡಿಸಬೇಕು. ಮಾಹಿತಿಯನ್ನು ಹುಡುಕಿ ಪಡೆದು ಉತ್ತರಿಸುವ ಖಂಉ (ಮಾಹಿತಿಗಳ ಸಂಗ್ರಹದಿಂದ ಆಧಾರಗಳನ್ನು ಪಡೆದು ಉತ್ತರ ರೂಪಿಸುವ) ವಿಧಾನದ ಮೂಲಕ, ಎ.ಐ.ಗೆ ವಿಶ್ವಾಸಾರ್ಹ ದಾಖಲೆಗಳಿಂದ ಆಕರಸಹಿತ ಮಾಹಿತಿ ಪಡೆದು ಉತ್ತರಿಸುವಂತೆ ಮಾಡಬಹುದು. ಇದರಿಂದ ಯಂತ್ರವು ತನ್ನ ಸಾಮಾನ್ಯ ತರಬೇತಿಯನ್ನಷ್ಟೇ ಅವಲಂಬಿಸದೆ, ನಿಖರವಾದ ಆಕರಗಳನ್ನು ಆಧರಿಸಿ ಸಮರ್ಥವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ.
ಇಲ್ಲಿ ಮಾಹಿತಿಯ ಪ್ರಮಾಣಕ್ಕಿಂತ ಅದರ ಗುಣಮಟ್ಟವೇ ಅತಿ ಮುಖ್ಯ. ಒಂದೇ ವಚನಕ್ಕೆ ಬೇರೆಬೇರೆ ಪಾಠಾಂತರಗಳಿದ್ದರೆ ಅಥವಾ ಒಂದು ಪದಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನಾರ್ಥಗಳಿದ್ದರೆ, ಆ ಸೂಕ್ಷ್ಮ ವ್ಯತ್ಯಾಸಗಳನ್ನೂ ದಾಖಲಿಸಬೇಕು. ಇಲ್ಲವಾದರೆ, ಯಂತ್ರ ಯಾವುದೋ ಒಂದು ಅರ್ಥವನ್ನೇ ಎಲ್ಲ ಸಂದರ್ಭಗಳಲ್ಲೂ ಸಾರ್ವತ್ರಿಕವಾಗಿ ಬಳಸುವ ಗಂಭೀರ ತಪ್ಪು ಮಾಡಬಹುದು. ಕನ್ನಡದ ಉತ್ತರಗಳು ಎಷ್ಟು ನಿಖರವಾಗಿವೆ, ಭಾಷೆ ಎಷ್ಟು ಸಹಜವಾಗಿದೆ, ಸನ್ನಿವೇಶದ ಸಂದರ್ಭವನ್ನು ಅದು ಸರಿಯಾಗಿ ಗ್ರಹಿಸಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಭಾಷಾತಜ್ಞರು, ಶಿಕ್ಷಕರು, ಸಾಹಿತಿಗಳು ಮತ್ತು ಸ್ಥಳೀಯ ಭಾಷಿಕರು ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡಬೇಕಿದೆ.
ಇದರ ಜೊತೆಗೆ ಕೆಲವು ಗಂಭೀರ ಅಪಾಯಗಳೂ ಇವೆ. ಎ.ಐ. ಕೆಲವೊಮ್ಮೆ ತಪ್ಪು ಮಾಹಿತಿಯನ್ನೂ ಅಚ್ಚುಕಟ್ಟಾಗಿ ನಿಜವೆಂಬಂತೆ ಬಿಂಬಿಸಬಹುದು; ವಚನ ಅಥವಾ ತಾತ್ತ್ವಿಕ ಕೃತಿಯ ಆಳವಾದ ಅರ್ಥವನ್ನೂ ತಪ್ಪಾಗಿ ವಿವರಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿರುವ ಆಂಗ್ಲಭಾಷೆಯ ತೀವ್ರ ಪ್ರಭಾವವಿರುವ, ವ್ಯಾಕರಣ ದೋಷಗಳಿಂದ ಕೂಡಿದ ಕನ್ನಡವನ್ನು ಕಲಿತು, ಅದನ್ನೇ ಸಹಜ ಕನ್ನಡವೆಂದು ಮಾರುಕಟ್ಟೆಯಲ್ಲಿ ಬಳಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ ಮೂಲ ಆಕರಗಳ ನಿರಂತರ ಪರಿಶೀಲನೆ, ಭಾಷಾತಜ್ಞರ ಕಟ್ಟುನಿಟ್ಟಾದ ಮೌಲ್ಯಮಾಪನ ಮತ್ತು ಬೌದ್ಧಿಕ ಹಕ್ಕುಸ್ವಾಮ್ಯದ ರಕ್ಷಣೆ ಅತ್ಯಾವಶ್ಯಕ. ಧ್ವನಿ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುವಾಗ ಸಾರ್ವಜನಿಕರ ಒಪ್ಪಿಗೆ ಪಡೆಯುವುದೂ ಅಷ್ಟೇ ಮುಖ್ಯ. ತಂತ್ರಜ್ಞಾನವನ್ನು ರೂಪಿಸುವುದಷ್ಟೇ ನಮ್ಮ ಕೆಲಸವಲ್ಲ, ಅದನ್ನು ಕಾಲಕಾಲಕ್ಕೆ ತಿದ್ದಿ ತೀಡಿ ಬೆಳೆಸುವ ವ್ಯವಸ್ಥೆಯೂ ನಮ್ಮಲ್ಲೇ ಇರಬೇಕು.
ಕೃತಕ ಬುದ್ಧಿಮತ್ತೆಗೆ ಕನ್ನಡದ ಜ್ಞಾನಪರಂಪರೆಯನ್ನು ಕಲಿಸುವುದು ಎಂದರೆ ಕೇವಲ ಹಳೆಯ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಯಂತ್ರಕ್ಕೆ ಒದಗಿಸುವುದಷ್ಟೇ ಅಲ್ಲ. ನಮ್ಮ ಭಾಷೆಯೊಳಗಿರುವ ಬದುಕಿನ ಅನುಭವ, ಲೋಕದರ್ಶನ, ಸಂಸ್ಕೃತಿ, ವಿವೇಕವನ್ನು ಮುಂದಿನ ಪೀಳಿಗೆಗೆ ಅಚ್ಚಳಿಯದೆ ತಲುಪಿಸುವುದೂ ಹೌದು. ಕನ್ನಡದ ಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ತಂತ್ರಜ್ಞಾನ ನಿಸ್ಸಂದೇಹವಾಗಿ ನೆರವಾಗಲಿ. ಆದರೆ ಆ ಜ್ಞಾನದ ಅಂತಃಸತ್ತ್ವವನ್ನು ಪರಿಶೀಲಿಸುವ, ಅದರ ಮೌಲ್ಯವನ್ನು ನಿಜವಾಗಿ ಗುರುತಿಸುವ, ತಪ್ಪು ನಿರೂಪಣೆಗಳಿಂದ ಅದನ್ನು ಕಾಪಾಡುವ ಸಂಪೂರ್ಣ ಹೊಣೆಗಾರಿಕೆ ನಮ್ಮದಾಗಿಯೇ ಉಳಿಯಬೇಕಿದೆ.
ಜ್ಞಾನಪರಂಪರೆಯ ಸಾಧ್ಯತೆಗಳು: ಕನ್ನಡದ ಜ್ಞಾನಸಂಪತ್ತನ್ನು ಡಿಜಿಟಲ್ ರೂಪದಲ್ಲಿ ಭದ್ರವಾಗಿ ಉಳಿಸುವುದರಿಂದ ಅಪರೂಪದ ಪದಗಳು, ಹಸ್ತಪ್ರತಿಗಳು ಮತ್ತು ಮೌಖಿಕ ಪರಂಪರೆ ಮುಂದಿನ ಪೀಳಿಗೆಗೂ ತಲುಪುತ್ತವೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನೆರವಾಗುವ ಅತ್ಯುತ್ತಮ ಶೈಕ್ಷಣಿಕ ಸಾಧನಗಳನ್ನು ರೂಪಿಸಬಹುದು. ಸಾಹಿತ್ಯದ ಐತಿಹಾಸಿಕ ಹಿನ್ನೆಲೆ, ಕಠಿಣ ಪದಗಳ ಅರ್ಥ ಮತ್ತು ವಿಭಿನ್ನ ವ್ಯಾಖ್ಯಾನಗಳನ್ನು ಸುಲಭವಾಗಿ ಮನವರಿಕೆ ಮಾಡಿಕೊಡಬಹುದು. ಇದರಿಂದ ವಿಶ್ವದ ವಿವಿಧ ಮೂಲೆಗಳಲ್ಲಿ ಇರುವವರಿಗೂ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ತಾತ್ತ್ವಿಕ ಚಿಂತನೆಗಳನ್ನು ಆಳವಾಗಿ ಅರಿಯಲು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಸ್ಥಳೀಯ ಜ್ಞಾನವನ್ನು ಅಳಿಯದಂತೆ ಉಳಿಸುವುದಕ್ಕೂ ಈ ತಂತ್ರಜ್ಞಾನ ನೆರವಾಗಬಲ್ಲದು. ಉದಾಹರಣೆಗೆ, ಹಿರಿಯ ರೈತರಿಗೆ ತಲೆಮಾರುಗಳಿಂದ ತಿಳಿದಿರುವ ಬೆಳೆಗಳ ವೈಶಿಷ್ಟ್ಯ, ಮಣ್ಣಿನ ಗುಣಲಕ್ಷಣ, ಮಳೆಯ ಸ್ವರೂಪ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ದಾಖಲಿಸಿ, ಅವುಗಳನ್ನು ಆಧುನಿಕ ಕೃಷಿ ಮಾಹಿತಿಯೊಂದಿಗೆ ತುಲನೆ ಮಾಡಬಹುದು. ಆದರೆ ಪಾರಂಪರಿಕ ಅನುಭವವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ಮಾಹಿತಿಗೆ ಸಂಪೂರ್ಣ ಪರ್ಯಾಯವೆಂದು ಪರಿಗಣಿಸದೆ, ಅದಕ್ಕೆ ಪೂರಕ ಜ್ಞಾನವಾಗಿ ಮಾತ್ರ ಬಳಸುವುದು ವಿವೇಚನೆಯಾಗುತ್ತದೆ.






















