ದಾವಣಗೆರೆ: ಕಬ್ಬಿನ ಬೆಲೆ ನಿಗದಿ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹಾಗೂ ಎಥೆನಾಲ್ ಉತ್ಪಾದನಾ ನೀತಿಯಲ್ಲಿನ ಬದಲಾವಣೆಗಳಿಂದ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ಸುಸ್ಥಿರ ನೀತಿ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ಎಫ್‌ಆರ್‌ಪಿ ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೇಂದ್ರ ಸರ್ಕಾರ ಮೊದಲು ಸ್ಪಷ್ಟವಾಗಿ ನಿಗದಿಪಡಿಸಬೇಕು. ಈ ಕುರಿತು ಕೇಂದ್ರದ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ಸಮಿತಿಯ ವರದಿ ಬಂದ ನಂತರ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುವುದು ಸಮಂಜಸ ಎಂದರು.
ಕಬ್ಬು ನುರಿಸುವ ಹಂಗಾಮು ಆರಂಭವಾಗುತ್ತಿದ್ದಂತೆ ಸಕ್ಕರೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಉಂಟಾಗುತ್ತದೆ. ಮತ್ತೊಂದೆಡೆ ರೈತರು ಕಬ್ಬಿಗೆ ಹೆಚ್ಚಿನ ಬೆಲೆ ನಿರೀಕ್ಷಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಆರ್ಥಿಕವಾಗಿ ಸಮರ್ಥವಾಗಿ ನಡೆಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಮತ್ತು ಕಬ್ಬಿನ ಎಫ್‌ಆರ್‌ಪಿ ಕುರಿತು ಸ್ಥಿರ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರದಿಂದ ಧನಸಹಾಯ ಅಥವಾ ತೆರಿಗೆ ವಿನಾಯಿತಿ ನೀಡುವ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆದಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಎಥೆನಾಲ್ ನೀತಿ ಬದಲಾವಣೆಯಿಂದ ಸಂಕಷ್ಟ: ಕೇಂದ್ರ ಸರ್ಕಾರದ ಎಥೆನಾಲ್ ಉತ್ಪಾದನಾ ನೀತಿಯಲ್ಲಿನ ದಿಢೀರ್ ಬದಲಾವಣೆ ಸಕ್ಕರೆ ಕಾರ್ಖಾನೆಗಳಿಗೆ ತೀವ್ರ ಆರ್ಥಿಕ ಸಂಕಷ್ಟ ತಂದಿದೆ. ಈ ಹಿಂದೆ ಕಬ್ಬಿನ ರಸ ಮತ್ತು ಸಿರಪ್‌ನಿಂದ ನೇರವಾಗಿ ಎಥೆನಾಲ್ ಉತ್ಪಾದಿಸಲು ಅವಕಾಶ ನೀಡಲಾಗಿತ್ತು. ಜತೆಗೆ ಬಡ್ಡಿ ಸಹಾಯಧನವನ್ನೂ ಘೋಷಿಸಿದ್ದರಿಂದ ಹಲವು ಕಾರ್ಖಾನೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸಿಕೊಂಡು ಬಂಡವಾಳ ಹೂಡಿಕೆ ಮಾಡಿದ್ದವು.
ಆದರೆ ಇದೀಗ ಕಬ್ಬಿನ ರಸದಿಂದ ನೇರ ಎಥೆನಾಲ್ ಉತ್ಪಾದನೆಗೆ ನಿರ್ಬಂಧ ವಿಧಿಸಿ, ಮೊಲಾಸಿಸ್‌ನಿಂದ ಮಾತ್ರ ಉತ್ಪಾದನೆಗೆ ಅವಕಾಶ ನೀಡಿರುವುದರಿಂದ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ. ಎಥೆನಾಲ್ ಘಟಕಗಳ ಸ್ಥಾಪನೆಗಾಗಿ ಪಡೆದಿರುವ ಸಾಲ ಮರುಪಾವತಿ ಹಾಗೂ ಆರ್ಥಿಕ ನಿರ್ವಹಣೆಯ ಮೇಲೆ ಈ ನೀತಿ ಬದಲಾವಣೆ ಗಂಭೀರ ಪರಿಣಾಮ ಬೀರಿದೆ ಎಂದು ವಿವರಿಸಿದರು.
ರೈತರಿಗೆ ನ್ಯಾಯಯುತ ಕಬ್ಬಿನ ಬೆಲೆ ದೊರೆಯುವ ಜತೆಗೆ ಸಕ್ಕರೆ ಕಾರ್ಖಾನೆಗಳೂ ಆರ್ಥಿಕವಾಗಿ ಸುಸ್ಥಿರವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ರೈತರು ಹಾಗೂ ಉದ್ಯಮದ ಹಿತ ಕಾಪಾಡುವ ಸಮತೋಲಿತ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.






















