ಬೆಂಗಳೂರು: “ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಸದಾಶಿವನಗರ ನಿವಾಸ ಮತ್ತು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ವಿಚಾರ ತಿಳಿಸಿದರು.
“ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಾಗುವುದು. ರಾಷ್ಟ್ರಧ್ವಜದ ಗೌರವ ಮತ್ತು ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದರು.
“ಮತ್ತೊಮ್ಮ ಸಂಪುಟದಲ್ಲಿ ತೀರ್ಮಾನ ಮಾಡಿ ಕಾನೂನು ತಂದು ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಇನ್ನು ಮುಂದೆ ಅವಕಾಶ ಮಾಡಿಕೊಟ್ಟು ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ಣಯ ಮಾಡಿ ಕಾನೂನುಬದ್ಧವಾಗಿ ಏನೆಲ್ಲ ರಕ್ಷಣೆ ಮಾಡಬೇಕು ಆ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಮ್ಮದಲ್ಲ, ನಿಮ್ಮ ಸರ್ಕಾರ. ಕನ್ನಡಿಗರ ಭಾವನೆಯ ಹೆಗ್ಗುರುತಾಗಿರುವ ಕೆಂಪು ಹಳದಿ ಬಾವುಟಕ್ಕೆ ಗೌರವ ನೀಡಲಾಗುವುದು. ಕನ್ನಡದ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಪರಂಪರೆ ಸಮಾನತೆ, ಶಾಂತಿಯ ಸಂದೇಶ ಸಾರುವ ಈ ಬಾವುಟವನ್ನು ನಾಡಧ್ವಜವಾಗಿ ಅಧಿಕೃತಗೊಳಿಸಲು ಮುಂದಾಗಿದ್ದೇವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹೆಗ್ಗುರತನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಈ ತೀರ್ಮಾನ ಮಾಡಲಾಗುವುದು” ಎಂದು ವಿವರಿಸಿದರು.
ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ: “ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ: “ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ, ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಅದನ್ನು ಆಚರಿಸಲು ನಾವು ಸೇರಿದ್ದೇವೆ. ಜಗದ ಏಳಿಗೆಗೆ ದ.ರಾ. ಬೇಂದ್ರೆ ಅವರು ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆ ಮೂಲಕ ಜ್ಞಾನದ ಸಂಸ್ಕೃತಿ ಹರಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ, ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ನಾವು ಯಾವುದೇ ದೇಶದಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು” ಎಂದು ಕರೆಕೊಟ್ಟರು.
ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿ: “ಈ ದೇಶದಿಂದ ಹೊರಗಿರುವ ಕನ್ನಡಿಗರು ಕನ್ನಡ ಸಂಘಟನೆ ಕಟ್ಟಿಕೊಂಡು ಮಾತೃಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಇಲ್ಲಿ ರಾಜ್ಯೋತ್ಸವ ಮಾತ್ರ ಆಚರಿಸುತ್ತಿಲ್ಲ. ಕನ್ನಡ ತಾಯಿ ಭುವನೇಶ್ವರಿ ಸೇವೆ. ಇದು ಮಾತೃಭಾಷೆಯ ಪೂಜೆ. ತಾಯಿ ನುಡಿ ಸೇವೆಗಿಂದ ದೊಡ್ಡ ಧರ್ಮ ಮತ್ತೊಂದಿಲ್ಲ. ಮಗು ಹುಟ್ಟಿದಾಗ ತಾಯಿ ಮಗುವನ್ನು ಪ್ರೀತಿಸಿದಂತೆ ನಾವು ನಮ್ಮ ತಾಯಿ ಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸಿದಂತೆ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಗಾರುತ್ತದೆ. ಕನ್ನಡಕಕ್ಕೆ ಕಿರುಬೆರಳು ಎತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ” ಎಂದು ತಿಳಿಸಿದರು.
“ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರ ದಾಸರು, ಸರ್ವಜ್ಞ, ಬಸವಣ್ಣ ಹುಟ್ಟಿದ ನಾಡು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಅನಂತಮೂರ್ತಿ, ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹ್ಮದ್ ರಂತಹ ದಿಗ್ಗಜರು ಮಾಡಿರುವ ಸೇವೆ, ನಮ್ಮ ಶ್ರೀಮಂತ ಭಾಷೆಗೆ ಕೊಟ್ಟಿರುವ ಗೌರವವನ್ನು ನಾವು ಸ್ಮರಿಸಬೇಕು. ಭಾರತ ಜನನಿಯ ತನುಜಾತೆ ಕನ್ನಡಮ್ಮನ ನಾಡಗೀತೆ ಕನ್ನಡಿಗನ ಸ್ವಾಭಿಮಾನ ಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡುತ್ತೇವೆ” ಎಂದರು.
“ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ಕನ್ನಡ ನಾಡು. ಈ ನಾನು ನುಡಿಯನ್ನು ಪ್ರೀತಿಸುವಂತೆ ನಾವು ಮಕ್ಕಳಿಗೆ ಕಲಿಸಬೇಕಿದೆ. ನಾವು ಭಾಷೆ ಪ್ರೀತಿಸಿದರೆ ಭಾಷೆ ನಮ್ಮನ್ನು ಕಾಪಾಡುತ್ತದೆ. ಭಾಷೆಗೆ ಗಡಿಯಿಲ್ಲ. ಡಿಜಿಟಲ್ ಯುಗದಲ್ಲಿ ಮೊಬೈಲ್ ನಲ್ಲಿ ನಾವು ಎಲ್ಲಾ ಭಾಷೆ ಬಳಸಬಹುದು. ಕಲಿಕೆ ಬಹಳ ವಿಸ್ತಾರವಾಗಿದೆ. ಭಾಷೆಗಳ ಸ್ಪರ್ಧೆಗಳ ಮಧ್ಯೆ ಕನ್ನಡ ಬೆಳೆಯಬೇಕು. ಅದಕ್ಕಾಗಿ ನಮ್ಮ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರಷ್ಟೇ ಸಾಲದು, ದಿನನಿತ್ಯ ಕನ್ನಡ ಭಾಷೆ ಬಳಸಬೇಕು” ಎಂದು ಸಂದೇಶ ನೀಡಿದರು.
ಕನ್ನಡ ಹೃದಯದ ಭಾಷೆಯಾಗಬೇಕು: “ನಮ್ಮ ಸರ್ಕಾರಿ ಶಾಲೆಗಳ ಜತೆ ಖಾಸಗಿ ಶಾಲೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆ ಶಾಲೆ ಶಿಕ್ಷಕರು ಹಾಗೂ ಸಂಸ್ಥೆಯವರಿಗೆ ಅಭಿನಂದಿಸುತ್ತೇನೆ. ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು. ಭಾಷೆ ಎಂಬುದು ಬದುಕು. ಭಾಷೆ ಇಲ್ಲದ ಬದುಕು ಮೂಕಿಚಿತ್ರದಂತಾಗುತ್ತದೆ. ಕನ್ನಡದ ಬೇರು ಕರ್ನಾಟಕದಲ್ಲಿದ್ದರೂ ಅದರ ರೆಂಬೆ ಕೊಂಬೆ, ರುಚಿ ಇಡೀ ಪ್ರಪಂಚಕ್ಕೆ ವಿಸ್ತರಿಸಿದೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ನೆಲೆಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕಲೆ ಕ್ರೀಡೆ, ವಿಜ್ಞಾನ ಐಟಿ ಬಿಟಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಕನ್ನಡದ ಸಾರ್ವಭೌಮತೆ ಬೆಳಎಯಬೇಕು. ಕನ್ನಡ ಎನ್ನುವುದು ಆಭರಣ ಇದ್ದಂತೆ. ಈ ಆಭರಣ ಕಳೆಯದಂತೆ ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ” ಎಂದರು.
“ನಮ್ಮ ಸರ್ಕಾರ ಕನ್ನಡ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ. ಮಕ್ಕಳ ಜಾಗತಿಕ ಸ್ಪರ್ಧೆಗೆ ಎಲ್ಲಾ ರೀತಿ ಸಿದ್ಧರಾಗಿ. ಇದಕ್ಕಾಗಿ ಕನ್ನಡದ ಬೇರು ಗಟ್ಟಿಯಾಗಬೇಕು. ಇದಕ್ಕಾಗಿ ನಮ್ಮ ಜವಾಬ್ದಾರಿ ಅರಿಯಬೇಕು. ಸರ್ಕಾರಿ ಶಾಲೆಗಳ ಮಕ್ಕಳು ನಮ್ಮ ರಾಜ್ಯಕ್ಕೆ ಹೆಮ್ಮೆತರುತ್ತಿದ್ದಾರೆ. ನಮ್ಮ ಕನ್ನಡದ ಬೇರುಗಳು ಇರುವುದು ನಮ್ಮ ಕನ್ನಡ ಸರ್ಕಾರಿ ಶಾಲೆಗಳಲ್ಲಿ. ಎಸ್ಎಸ್ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುವೆ. ಕನ್ನಡದ ಅಳಿವು, ಉಳಿವು ಈ ವಿದ್ಯಾರ್ಥಿಗಳ ಕೈಯಲ್ಲಿದೆ. 6ನೇ ತರಗತಿಯಿಂದ ಎಐ ತರಬೇತಿ ನೀಡಲು ನಾವು ಮುಂದಾಗಿದ್ದೇವೆ. 12ನೇ ತರಗತಿವರೆಗೂ ಮುಂದುವರಿಸುತ್ತೇವೆ. ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಸಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ” ಎಂದು ವಿವರಿಸಿದರು.



















