ಬಳ್ಳಾರಿ(ಕುರುಗೋಡು): ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರತೆ ಒದಗಿಸಬೇಕು ಎಂಬ ಆಶಯದೊಂದಿಗೆ ಕುರುಗೋಡು ಪಟ್ಟಣದ ನಿವೃತ್ತ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ಗಾದಿಲಿಂಗಪ್ಪ ಅವರು ಗುಜರಾತ್ ರಾಜ್ಯದ ನರ್ಮದಾ ನದಿ ತಟದಲ್ಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಎದುರು ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ಸಮಾಜದಲ್ಲಿ ತಂದೆ-ತಾಯಿ ಹಾಗೂ ಕುಟುಂಬದ ಆಶ್ರಯವಿಲ್ಲದೆ ಬದುಕುತ್ತಿರುವ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಸುಲಭವಾಗಿ ದೊರೆಯಬೇಕು. ಇತರ ಮಕ್ಕಳಂತೆ ಅವರೂ ಗೌರವಯುತವಾಗಿ ಬದುಕಿ ಸ್ವಾವಲಂಬಿಗಳಾಗಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂಬುದು ಗಾದಿಲಿಂಗಪ್ಪ ಅವರ ಪ್ರಮುಖ ಆಶಯವಾಗಿದೆ.
ಈಗಾಗಲೇ ದೇಶದ ಪ್ರಧಾನಮಂತ್ರಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಗಳ ಮೂಲಕ ಮನವಿ ಸಲ್ಲಿಸಿರುವ ಗಾದಿಲಿಂಗಪ್ಪ ಅವರು, ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿಶೇಷ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಫಲಾಪೇಕ್ಷೆಯಿಲ್ಲದ ಸಮಾಜಮುಖಿ ಪಯಣ: ಅನಾಥ ಮಕ್ಕಳ ಬದುಕಿನಲ್ಲಿ ಶಿಕ್ಷಣದ ಬೆಳಕು ಮೂಡಬೇಕು, ಅವರಿಗೆ ಉದ್ಯೋಗಾವಕಾಶಗಳು ದೊರೆಯಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕುವಂತಾಗಬೇಕು ಎಂಬ ಉದ್ದೇಶದಿಂದ ಗಾದಿಲಿಂಗಪ್ಪ ಅವರು ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ವಿಶೇಷವೆಂದರೆ, ಈ ಪ್ರವಾಸವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ನಡೆಸುತ್ತಿರುವುದು ಅವರ ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ಎದುರು ಉಪವಾಸ ನಡೆಸುವ ಮೂಲಕ ಅನಾಥ ಮಕ್ಕಳ ಹಕ್ಕುಗಳ ಕುರಿತು ಸಮಾಜ ಮತ್ತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಒಬ್ಬ ನಿವೃತ್ತ ಶಿಕ್ಷಕರಾಗಿ ತಮ್ಮ ವೃತ್ತಿಜೀವನದ ನಂತರವೂ ಮಕ್ಕಳ ಭವಿಷ್ಯ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ದೇಶಾದ್ಯಂತ ಜಾಗೃತಿ ಮೂಡಿಸಲು ಮುಂದಾಗಿರುವ ಗಾದಿಲಿಂಗಪ್ಪ ಅವರ ಪ್ರಯತ್ನ ಗಮನಾರ್ಹವಾಗಿದೆ. ವೈಯಕ್ತಿಕ ಲಾಭಕ್ಕಿಂತ ಸಮಾಜದ ನಿರ್ಗತಿಕ ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡುವ ಅವರ ಈ ಪಯಣ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವಂತಹ ಸಾಮಾಜಿಕ ಸಂದೇಶವನ್ನು ಸಾರಿದೆ.
ದೇಶಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವ ಪ್ರಯತ್ನ: ಅನಾಥ ಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ದೊರೆಯಬೇಕು. ತಂದೆ-ತಾಯಿ ಹಾಗೂ ಕುಟುಂಬದ ಆಸರೆ ಇಲ್ಲದ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಎದುರಿಸುವ ಸವಾಲುಗಳಿಗೆ ಪರಿಹಾರ ದೊರೆಯಬೇಕು ಎಂಬ ಉದ್ದೇಶದಿಂದ ಗಾದಿಲಿಂಗಪ್ಪ ಅವರು ಈ ಅಭಿಯಾನ ಕೈಗೊಂಡಿದ್ದಾರೆ.






















