SK Home Ad
Home ಸುದ್ದಿ ರಾಜ್ಯ ನಿಷೇಧಾಜ್ಞೆಗೆ ರೈತರ ಸೆಡ್ಡು: ಅ. 31ಕ್ಕೆ ಕರ್ನಾಟಕ ಬಂದ್

ನಿಷೇಧಾಜ್ಞೆಗೆ ರೈತರ ಸೆಡ್ಡು: ಅ. 31ಕ್ಕೆ ಕರ್ನಾಟಕ ಬಂದ್

0
73

ಬೆಳಗಾವಿ: ಹಿಂದೆ ಪ್ರತಿಭಟನೆ ವೇಳೆ ಸಹಕಾರದ ಭರವಸೆ ನೀಡಿದ್ದ ಜಿಲ್ಲಾಡಳಿತ ಈಗ ನಿಷೇಧಾಜ್ಞೆಯ ಅಸ್ತ್ರ ಪ್ರಯೋಗಿಸಿರುವುದಕ್ಕೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಯ ಆದೇಶಕ್ಕೆ ಸೆಡ್ಡು ಹೊಡೆದು ಅಕ್ಟೋಬರ್ 31ರಂದು ಕರ್ನಾಟಕ ಬಂದ್ ನಡೆಸುವಂತೆ ಕರೆ ನೀಡಿದ್ದು, ಕಬ್ಬು ಬೆಳೆಗಾರರ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ.

‘ನಿಷೇಧಾಜ್ಞೆ ಹಾಕಲಿ, ಎಷ್ಟು ಜನರನ್ನು ಬಂಧಿಸುತ್ತಾರೆ ನೋಡೋಣ’ ಎಂದು ಸವಾಲು ಹಾಕಿರುವ ರೈತ ಸಂಘಟನೆಯ ಮುಖಂಡ ಶಶಿಕಾಂತ ಗುರೂಜಿ, ಜಿಲ್ಲಾ ಕೇಂದ್ರಗಳಿಂದ ಹಳ್ಳಿಗಳವರೆಗೆ ಪ್ರತಿಭಟನೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಬೆಲೆಯ ಬೇಡಿಕೆಗೆ ಪರಿಹಾರ ಸಿಗದೆ ನಿರ್ಬಂಧದ ಆದೇಶ ಹೊರಡಿಸಿರುವುದೇಕೆ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಈ ಹಿಂದೆ ರೈತರು ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದರು. ಬಳಿಕ ಮುಖ್ಯಮಂತ್ರಿ ಕಿತ್ತೂರಿಗೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಆ ಮಾತುಕತೆಯ ನಂತರವೂ ಪ್ರತಿಭಟನೆ ಹಿಂಪಡೆಯಲು ರೈತರು ಒಪ್ಪಿರಲಿಲ್ಲ.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ನಡೆದ ಸಭೆಯ ಬಳಿಕವಷ್ಟೇ ಪ್ರತಿಭಟನೆ ವಾಪಸ್ ಪಡೆದಿದ್ದರು. ಈಗ ಮತ್ತೆ ಹೋರಾಟಕ್ಕೆ ನಿರ್ಬಂಧ ವಿಧಿಸಿರುವುದು ರೈತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.