SK Home Ad
Home ನಮ್ಮ ಜಿಲ್ಲೆ ಬೆಂಗಳೂರು ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ

ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ: ಸಿಎಂ

0
63
File Photo

ಬೆಂಗಳೂರು: “ಕಳೆದ ಒಂದೆರಡು ವರ್ಷದಿಂದ ಹಾಲಿನ ದರ ಏರಿಸಲು ಬೇಡಿಕೆ ಇತ್ತು. ರೈತರ ನಷ್ಟ ತಡೆಯಲು ಹಾಲಿನ ದರ ಏರಿಕೆ ಮಾಡಲಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು 8 ರೂ. ಹೆಚ್ಚಿಸಿರುವ ಬಗ್ಗೆ ಕೇಳಿದಾಗ, “ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ರೈತರು ನಮಗೆ ಮುಖ್ಯ” ಎಂದು ತಿಳಿಸಿದರು.

12 ರಿಂದ 15 ರೂ.ಗಳ ವರೆಗೆ ಹೆಚ್ಚಳಕ್ಕೆ ಬೇಡಿಕೆ: ಜನಸಾಮಾನ್ಯರಿಗೆ ಹಾಲಿನ ಬೆಲೆ ಹೆಚ್ಚಳದಿಂದ ಹೊರೆಯಾಗುವುದಿಲ್ಲವೆ ಎಂದು ಕೇಳಿದಾಗ, “ರೈತರಿದ್ದರೆ ಹಾಲು ಕುಡಿಯಬಹುದು. ಇಲ್ಲದಿದ್ದರೆ ಹಾಲು ಕುಡಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈಗಾಗಲೇ ನಮ್ಮ ಸಚಿವರು ಈ ಬಗ್ಗೆ ತಿಳಿಸಿದ್ದು, ಅದರ ಮೇಲೆ ಹೆಚ್ಚಿಗೆ ಹೇಳುವಂತದ್ದು ಏನು ಇಲ್ಲ. ಪ್ಲಾಸ್ಟಿಕ್ ಕವರ್, ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ಹಾಲಿನ ಸಾರಿಗೆ ವೆಚ್ಚವೂ ಏರಿಕೆಯಾಗಿದೆ. 12 ರಿಂದ 15 ರೂ.ಗಳ ವರೆಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ನಾವು ಎಲ್ಲರೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ” ಎಂದರು.

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ: “ಪ್ರತಿ ಲೀಟರ್ ನೀರಿಗೆ 30-35 ರೂ. ಗಳನ್ನು ನೀಡಲಾಗುತ್ತಿದೆ. ಪಕ್ಕದ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ನಮ್ಮಲ್ಲಿ ಬೆಲೆ ಕಡಿಮೆ ಇದ್ದಿದ್ದರಿಂದ ಆಂಧ್ರ, ಮಹಾರಾಷ್ಟ್ರಕ್ಕೂ ಹಾಲು ಹೋಗುತ್ತಿತ್ತು. ಅದನ್ನು ತಡೆಯಬೇಕಿತ್ತು. ತಿರುಪತಿಗೆ ನಂದಿನಿ ತುಪ್ಪವನ್ನೇ ಖರೀದಿ ಮಾಡುತ್ತಾರೆ. ಅವರು ಅಲ್ಲಿಯೇ ಖರೀದಿಸಬಹುದು. ಆದರೆ ನಂದಿನಿ ಬಗ್ಗೆ ಅವರಿಗೆ ನಂಬಿಕೆ ಇದೆ. ಮೈಸೂರು ಪಾಕ್ ಸೇರಿದಂತೆ ಇತರೆ ಪದಾರ್ಥಗಳಿಗೆ ನಂದಿನ ತುಪ್ಪದ ಬೇಡಿಕೆ ಇದೆ. ಇದರ ಜೊತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರಿಗೆ ನಷ್ಟವಾಗುತ್ತಿರುವುದರಿಂದ ಸರ್ಕಾರ ಈ ತೀರ್ಮಾನವನ್ನು ಮಾಡಿದೆ” ಎಂದು ಸ್ಪಷ್ಟಪಡಿಸಿದರು.

ಹಾಲಿನ ದರ ಏರಿಕೆಗೆ ಪಕ್ಷಾತೀತ ಬೇಡಿಕೆ: “ವಿಧಾನಸಭೆ ವಿಧಾನ ಪರಿಷತ್ತಿನಲ್ಲಿಯೂ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಪಕ್ಷಾತೀತವಾಗಿ ಎಲ್ಲ ಶಾಸಕರು ಬೇಡಿಕೆ ಇಟ್ಟಿದ್ದರು. ಚುನಾವಣೆ ಇದ್ದುದ್ದರಿಂದ ತೀರ್ಮಾನ ಮಾಡಲಾಗಲಿಲ್ಲ. ಈಗ ಚುನಾವಣೆ ಮುಗಿದಿರುವುದರಿಂದ ತೀರ್ಮಾನ ಕೈಗೊಳ್ಳಲಾಗಿದೆ” ಎಂದರು.

ಬಸ್ ದರ ಏರಿಕೆ, ಸಾರಿಗೆ ಇಲಾಖೆ ತೀರ್ಮಾನ: ಬಸ್ ದರ ಏರಿಕೆ ಬಗ್ಗೆ ಮಾತನಾಡಿ, “ಸಾರಿಗೆ ಇಲಾಖೆಯಲ್ಲಿ ಬಹಳ ನಷ್ಟವಾಗಿದ್ದು, ಡೀಸಲ್‌ಗೆ ಕೂಡ ಅನುದಾನವಿರಲಿಲ್ಲ. ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಸರ್ಕಾರ ನೀಡಲಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯವರೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ” ಎಂದರು.