SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಕಬ್ಬು ಹೋರಾಟದ ಹಿಂದೆ ರಾಜಕೀಯವಿಲ್ಲ, ರೈತರ ನೋವಿದೆ

ಕಬ್ಬು ಹೋರಾಟದ ಹಿಂದೆ ರಾಜಕೀಯವಿಲ್ಲ, ರೈತರ ನೋವಿದೆ

0
1

ಬೆಳಗಾವಿ: ‘ಕಬ್ಬು ಕಡಿದು, ಗಾಡಿಗೆ ತುಂಬಿ ಕಾರ್ಖಾನೆಗೆ ಕಳುಹಿಸುವ ದುಡಿಮೆಯ ಬದುಕನ್ನು ಕಂಡಿದ್ದೇನೆ. ರೈತನ ಕಷ್ಟ ನನಗೆ ಗೊತ್ತು. ಈ ಹೋರಾಟದ ಹಿಂದೆ ರಾಜಕೀಯವಾಗಲಿ, ಜಾತಿಯಾಗಲಿ ಇಲ್ಲ; ರೈತರ ನೋವಿದೆ’ ಎಂದು ಶಶಿಕಾಂತ ಗುರೂಜಿ ಹೇಳಿದರು.

ಗುರ್ಲಾಪುರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಬ್ಬಿಗೆ ಟನ್‌ಗೆ 5,500 ಬೆಲೆ ನೀಡಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದರು. ರೈತರಿಗೆ ಗೌರವಯುತವಾಗಿ ನ್ಯಾಯ ದೊರಕಿಸಿಕೊಡುವುದೇ ಹೋರಾಟದ ಉದ್ದೇಶ. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಲೆ ವಿಚಾರದಲ್ಲಿ ವಿಶ್ವಾಸ ಮೂಡಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಲೆಯ ಮಾತುಕತೆ, ಹೋರಾಟದ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘಟನೆಯಲ್ಲಿ ಕೆಲಸ ಮಾಡಿ, ಹೋರಾಟದ ಮೂಲಕ ಮುಂಚೂಣಿಗೆ ಬರುವವರ ವಿರುದ್ಧ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುವುದು ಸಹಜ. ಆದರೆ, ಟೀಕೆಗೆ ಸತ್ಯದ ಆಧಾರ ಇರಬೇಕು ಎಂದು ಹೇಳಿದರು.

ಹೋರಾಟದ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸುವ ಪ್ರಯತ್ನಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ರೈತರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ತಮ್ಮ ಬದ್ಧತೆ ಮುಂದುವರಿಯಲಿದೆ ಎಂದು ತಿಳಿಸಿದರು. ವೈಯಕ್ತಿಕ ಟೀಕೆಗಳ ನಡುವೆಯೂ ರೈತರ ಬೇಡಿಕೆಗಾಗಿ ಕೆಲಸ ಮಾಡುವುದಾಗಿ ಹೇಳಿದರು.

ಕಬ್ಬು ಬೆಲೆ ನಿಗದಿಯ ವಿಚಾರದಲ್ಲಿ ರೈತರು ವಿಶ್ವಾಸದಿಂದ ಇರಬೇಕು ಎಂದು ಮನವಿ ಮಾಡಿದ ಅವರು, ಪ್ರಸಕ್ತ ಸಾಲಿನ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಸ್ಪಂದನೆಗೆ ಗೌರವ; ನ್ಯಾಯಕ್ಕಾಗಿ ಒತ್ತಾಯ: ರೈತರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಿರುವುದನ್ನು ಗೌರವಿಸುವುದಾಗಿ ಶಶಿಕಾಂತ ಗುರೂಜಿ ಹೇಳಿದರು. ಸರ್ಕಾರದ ಸ್ಪಂದನೆಗೆ ಗೌರವ ನೀಡುವ ಜೊತೆಗೆ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.