ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಮಹಾಕಾವ್ಯ ಆಧಾರಿತ ಚಿತ್ರ ‘ರಾಮಾಯಣ: ದಿ ರೈಸ್ ಆಫ್ ಎ ಲೆಜೆಂಡ್’ (Ramayana: The Rise of a Legend) ಲಾಸ್ ಏಂಜಲೀಸ್ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ನ ಡೇವಿಡ್ ಗೆಫೆನ್ ಥಿಯೇಟರ್ನಲ್ಲಿ ಭರ್ಜರಿ ಜಾಗತಿಕ ಪ್ರೀಮಿಯರ್ ಕಂಡಿದ್ದು, ಆರಂಭಿಕ ಪ್ರದರ್ಶನದಲ್ಲೇ ಪ್ರೇಕ್ಷಕರಿಂದ ಮುಕ್ತಕಂಠದ ಪ್ರಶಂಸೆ ವ್ಯಕ್ತವಾಗಿದೆ.
ಚಿತ್ರ ವೀಕ್ಷಿಸಿದ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಪ್ರೇಕ್ಷಕರು ‘ಲೆಟರ್ಬಾಕ್ಸ್ಡ್’ (Letterboxd) ಪ್ಲಾಟ್ಫಾರ್ಮ್ನಲ್ಲಿ 5 ಸ್ಟಾರ್ ರೇಟಿಂಗ್ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ತೋರಿರುವ ಪಾವಿತ್ರ್ಯತೆ ಹಾಗೂ ಭಾವನಾತ್ಮಕ ಅಭಿನಯ ದೈವಿಕ ಅನುಭವ ನೀಡಿದರೆ, ಲಂಕೇಶ್ವರ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಪ್ರತಿಮ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ಎಂದು ಸಿನಿಪ್ರಿಯರು ಗುಣಗಾನ ಮಾಡಿದ್ದಾರೆ.
ಸಾಯಿ ಪಲ್ಲವಿ ಸೀತೆಯಾಗಿ ನೈಜತೆ ತುಂಬಿದ್ದರೆ, ಕ್ಲೈಮ್ಯಾಕ್ಸ್ನ ರೋಮಾಂಚನ ಮತ್ತು ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ಬರುವ ಹನುಮಂತನ ಝಲಕ್ ಎರಡನೇ ಭಾಗದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ. ಹಾಲಿವುಡ್ನ ಪ್ರಮುಖ ವಿಎಫ್ಎಕ್ಸ್ ಸಂಸ್ಥೆಗಳಾದ ILM ಹಾಗೂ ವೆಟಾ ಎಫ್ಎಕ್ಸ್ಗೆ (WetaFX) ಪೈಪೋಟಿ ನೀಡುವಂತೆ ನಮಿತ್ ಮಲ್ಹೋತ್ರಾ ಒಡೆತನದ DNEG ಸಂಸ್ಥೆ ಅದ್ಭುತ ಗ್ರಾಫಿಕ್ಸ್ ನೀಡಿದ್ದು, ದೈವಿಕ ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ.
ಭಾರತೀಯ ಚಿತ್ರಗಳನ್ನು ಎಂದೂ ನೋಡದ ಅಂತಾರಾಷ್ಟ್ರೀಯ ವೀಕ್ಷಕರು ಸಹ ಚಿತ್ರದ ಭಾವನಾತ್ಮಕ ಶ್ರೀಮಂತಿಕೆಗೆ ಕಣ್ಣೀರಿಟ್ಟಿದ್ದಾಗಿ ಹಂಚಿಕೊಂಡಿದ್ದಾರೆ. ನವೆಂಬರ್ 5 ರಂದು ಭಾರತದಾದ್ಯಂತ ತೆರೆಕಾಣಲಿರುವ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿರಂಗಕ್ಕೆ ಹೊಸ ಕಿರೀಟ ತೊಡಿಸುವ ಎಲ್ಲಾ ಮುನ್ಸೂಚನೆ ನೀಡಿದೆ.






















