SK Home Ad
Home ಸಿನಿ ಮಿಲ್ಸ್ ಹಾಲಿವುಡ್ ಅಂಗಳದಲ್ಲಿ ರಾಕಿಂಗ್ ರಾವಣನ ಅಬ್ಬರ: LA ರೆಡ್ ಕಾರ್ಪೆಟ್‌ನಲ್ಲಿ ಯಶ್ ಧರಿಸಿದ್ದ 10 ತಲೆಯ...

ಹಾಲಿವುಡ್ ಅಂಗಳದಲ್ಲಿ ರಾಕಿಂಗ್ ರಾವಣನ ಅಬ್ಬರ: LA ರೆಡ್ ಕಾರ್ಪೆಟ್‌ನಲ್ಲಿ ಯಶ್ ಧರಿಸಿದ್ದ 10 ತಲೆಯ ಚಿನ್ನದ ಬ್ರೂಚ್ ರಹಸ್ಯವೇನು?

0
34

ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ ನಡೆದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಜಾಗತಿಕ ಪ್ರೀಮಿಯರ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಎಲ್ಲರ ಕಣ್ಮನ ಸೆಳೆದಿದ್ದಾರೆ.

ಲಂಕೇಶ್ವರ ರಾವಣನ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗಿರುವ ಯಶ್, ತಮ್ಮ ಕಪ್ಪು ಬಣ್ಣದ ರಾಯಲ್ ಸೂಟ್‌ಗೆ 10 ತಲೆಯ ಚಿನ್ನದ ರಾವಣ ಬ್ರೂಚ್ ಧರಿಸಿ ರೆಡ್ ಕಾರ್ಪೆಟ್‌ಗೆ ಅಪ್ಪಟ ಪೌರಾಣಿಕ ಟಚ್ ನೀಡಿದ್ದಾರೆ.

ಯಶ್ ಸೂಟ್ ಮೇಲೆ ರಾರಾಜಿಸಿದ ಈ ಬಂಗಾರದ ರಾವಣ ಮುಖದ ಬ್ರೂಚ್‌ ಕೇವಲ ಆಭರಣವಾಗಿರದೆ, ಮಹಾನ್ ಪಂಡಿತನ ಸಂಕೇತವೂ ಹೌದು. ರಾವಣನ ದಶಮುಖಗಳು ಆತನ 4 ವೇದಗಳು ಹಾಗೂ 6 ವೇದಾಂಗಗಳ ಅಗಾಧ ಪಾಂಡಿತ್ಯದ ಪ್ರತೀಕ. ರಾವಣನನ್ನು ಕೇವಲ ಖಳನಾಯಕನಂತೆ ಬಿಂಬಿಸದೆ, ಆತನೊಳಗಿನ ಮಹಾನ್ ವಿದ್ವಾಂಸ ಮತ್ತು ಯೋಧನ ವ್ಯಕ್ತಿತ್ವವನ್ನು ಪ್ರದರ್ಶಿಸಲು ಯಶ್ ಈ ವಿಶಿಷ್ಟ ಆಭರಣ ಧರಿಸಿದ್ದರು.

ಕಪ್ಪು ಬಣ್ಣದ ಸೂಟ್, ಕಪ್ಪು ಕೂಲಿಂಗ್ ಗ್ಲಾಸ್, ಕಿವಿಯೋಲೆ ಮತ್ತು ಸಿಗ್ನೇಚರ್ ಗಡ್ಡದೊಂದಿಗೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಮಿಂಚಿದರು. ಈ ಐತಿಹಾಸಿಕ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಪ್ರಭು ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ನಟಿಸಿರುವ ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಯಾಗಿದ್ದರು.

ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಬಣ್ಣಹಚ್ಚಿದ್ದಾರೆ.