SK Home Ad
Home ಸುದ್ದಿ ವಿದೇಶ ಸೌದಿಯಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ: ಸುರಕ್ಷಿತ ವಾಪಸಾತಿಗೆ ರಾಜ್ಯ ಸರ್ಕಾರದ ಪ್ರಯತ್ನ

ಸೌದಿಯಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ: ಸುರಕ್ಷಿತ ವಾಪಸಾತಿಗೆ ರಾಜ್ಯ ಸರ್ಕಾರದ ಪ್ರಯತ್ನ

0
84
ಸೌದಿಯಲ್ಲಿ ಸಿಲುಕಿರುವ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳು: ಸುರಕ್ಷಿತ ವಾಪಸಾತಿಗೆ ರಾಜ್ಯ ಸರ್ಕಾರದ ಪ್ರಯತ್ನ

ವಿಮಾನ ಸೇವೆ ವ್ಯತ್ಯಯ: ಸೌದಿಯಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಸಹಾಯವಾಣಿ

ಬೆಂಗಳೂರು: ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ನಗರಗಳಲ್ಲಿ ವಿಮಾನ ಸೇವೆಗಳ ವ್ಯತ್ಯಯದಿಂದ ಸಿಲುಕಿರುವ ಕರ್ನಾಟಕದ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು, ಯಾತ್ರಾರ್ಥಿಗಳ ತುರ್ತು ವಾಪಸಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ

ವಿಮಾನ ಸೇವೆಗಳ ವ್ಯತ್ಯಯದಿಂದ ಸೌದಿ ಅರೇಬಿಯಾದಲ್ಲಿ ಉಳಿದಿರುವ ಕರ್ನಾಟಕದ ಸುಮಾರು 600 ಉಮ್ರಾ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ಭಾರತ ಸರ್ಕಾರ, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜೆದ್ದಾದ ಭಾರತೀಯ ಕಾನ್ಸುಲೇಟ್‌ ಜೊತೆ ನಿರಂತರ ಸಂಪರ್ಕದಲ್ಲಿದೆ.

ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ತಂಡ ಸೌದಿಗೆ ತೆರಳಿ ಯಾತ್ರಾರ್ಥಿಗಳನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಭಾರತೀಯ ಸಮುದಾಯದ ಸ್ವಯಂಸೇವಕ ಸಂಘಟನೆಗಳ ಸಹಕಾರದೊಂದಿಗೆ ಅಗತ್ಯವಿರುವವರಿಗೆ ಆಹಾರ, ಔಷಧ ಮತ್ತು ವಸತಿ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಉಮ್ರಾ ಯಾತ್ರೆ ಪೂರ್ಣಗೊಳಿಸಿ ಭಾರತಕ್ಕೆ ಮರಳಬೇಕಿದ್ದ ಯಾತ್ರಾರ್ಥಿಗಳು ವಿಮಾನ ಸಂಚಾರದಲ್ಲಿನ ವ್ಯತ್ಯಯದಿಂದಾಗಿ ತೊಂದರೆ ಎದುರಿಸುತ್ತಿದ್ದಾರೆ. ಇವರ ವಾಪಸಾತಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರ ಸಂಬಂಧಪಟ್ಟ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಮಾಡಿದೆ. ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಕ್ಷೇಮಕ್ಕೆ ಆದ್ಯತೆ ನೀಡಲಾಗಿದ್ದು, ಅವರನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆತರುವ ಪ್ರಯತ್ನ ಮುಂದುವರಿದಿದೆ.

ರಾಜ್ಯ ಸರ್ಕಾರವು ಯಾತ್ರಾರ್ಥಿಗಳು ಮತ್ತು ಅವರ ಕುಟುಂಬದವರು ಆತಂಕಪಡದೆ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ. ಯಾತ್ರಾರ್ಥಿಗಳು ವಿಮಾನಯಾನ ಸಂಸ್ಥೆ ಹಾಗೂ ಟೂರ್ ಆಪರೇಟರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿಮಾನ ವೇಳಾಪಟ್ಟಿಯನ್ನು ಖಚಿತಪಡಿಸಿಕೊಂಡ ನಂತರವೇ ವಿಮಾನ ನಿಲ್ದಾಣಕ್ಕೆ ತೆರಳಬೇಕು. ಸೌದಿ ಅರೇಬಿಯಾದ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರ ಕಚೇರಿ ನೀಡುವ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾತ್ರಾರ್ಥಿಗಳ ಕುಟುಂಬದವರು ಆತಂಕಪಡದೆ ಅಧಿಕೃತ ಮಾಹಿತಿಯನ್ನು ಪಡೆದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ. ಮಾಹಿತಿ ಅಥವಾ ನೆರವು ಅಗತ್ಯವಿರುವವರು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಹಾಯವಾಣಿಗಳನ್ನು ಸಂಪರ್ಕಿಸಬಹುದು. ಯಾತ್ರಾರ್ಥಿಗಳು ತಮ್ಮ ವಿಮಾನಯಾನ ಸಂಸ್ಥೆಗಳು ಹಾಗೂ ಟೂರ್ ಆಪರೇಟರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿಮಾನ ವೇಳಾಪಟ್ಟಿ ಮತ್ತು ಪ್ರಯಾಣದ ಕುರಿತು ಅಧಿಕೃತ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಯಾತ್ರಾರ್ಥಿಗಳ ಸುರಕ್ಷಿತ ವಾಪಸಾತಿ ಖಚಿತಪಡಿಸುವುದು ಸರ್ಕಾರದ ಬದ್ಧತೆಯಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಮುಂದುವರಿದಿದೆ.

ಸಹಾಯವಾಣಿ ಸಂಖ್ಯೆಗಳು:

📲 ಕರ್ನಾಟಕ ರಾಜ್ಯ ಹಜ್ ಸಮಿತಿ: 94835 03132, 78997 07775

☎ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070, 080-22253707