ಕಾರ್ಮಿಕರ ದೀಪಾವಳಿ ಸಂಭ್ರಮಕ್ಕೆ ಜೂಜಾಟದ ಆತಂಕ: ಅಕ್ರಮ ಇಸ್ಪೀಟ್ ಅಡ್ಡೆಗಳಿಗೆ ಕಡಿವಾಣ ಹಾಕಲು ಆಗ್ರಹ
ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ದಾಂಡೇಲಿಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಮಿಕರಿಗೆ ಬೋನಸ್ ಹಣ ಜಮಾ ಮಾಡುವ ಪ್ರಕ್ರಿಯೆ ಗುರುವಾರದಿಂದ ಆರಂಭಗೊಂಡಿದೆ. ಕಾರ್ಮಿಕ ಕುಟುಂಬಗಳು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕಾತರದಿಂದ ಕಾಯುತ್ತಿರುವ ಹೊತ್ತಿನಲ್ಲೇ, ಅವರ ದುಡಿಮೆಯ ಹಣವನ್ನು ಜೂಜಾಟದ ಮೂಲಕ ಲೂಟಿ ಮಾಡುವ ಅಕ್ರಮ ಇಸ್ಪೀಟ್ ಅಡ್ಡೆಗಳ ಆತಂಕ ಎದುರಾಗಿದೆ. ಇಂತಹ ಅಡ್ಡೆಗಳಿಗೆ ಕಡಿವಾಣ ಹಾಕಿ ಕಾರ್ಮಿಕ ಕುಟುಂಬಗಳ ಹಿತ ಕಾಪಾಡುವಂತೆ ಅಟಲ್ ಅಭಿಮಾನಿ ಸಂಘದ ಅಧ್ಯಕ್ಷ ವಿಷ್ಣು ನಾಯರ್ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ನಲ್ಲಿ ಎರಡು ಸಾವಿರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಸೇರಿದಂತೆ 1400 ಖಾಯಂ ನೌಕರರು, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪ್ರತಿವರ್ಷ ದೀಪಾವಳಿಗೂ ಮುನ್ನ ಬೋನಸ್ ವಿತರಿಸಲಾಗುತ್ತದೆ. ಈ ವರ್ಷ 20 ಕೋಟಿಯಷ್ಟು ಹಣ ಕಾರ್ಮಿಕರಿಗೆ ಬೋನಸ್ ರೂಪದಲ್ಲಿ ಹಂಚಲಾಗುತ್ತಿದೆ ಎಂದು ಕಾರ್ಮಿಕ ಮುಖಂಡರು ಮಾಹಿತಿ ನೀಡಿದ್ದಾರೆ.ಈ ಹಣ ಕಾರ್ಮಿಕ ಕುಟುಂಬಗಳ ಪಾಲಿಗೆ ಹಬ್ಬದ ಖರೀದಿ, ಹೊಸ ಬಟ್ಟೆ ಹಾಗೂ ಇತರ ಅಗತ್ಯಗಳಿಗೆ ಪ್ರಮುಖ ಆಸರೆಯಾಗಿದೆ. ಬೋನಸ್ ಹಣ ಕೈ ಸೇರುತ್ತಿದ್ದಂತೆ ದಾಂಡೇಲಿಯ ಮಾರುಕಟ್ಟೆ ಮತ್ತು ವ್ಯಾಪಾರ ವಹಿವಾಟುಗಳೂ ಚುರುಕುಗೊಳ್ಳುತ್ತವೆ.
ಆದರೆ, ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ನಗರದ ಕೆಲವು ಲಾಡ್ಜ್ಗಳು, ಸಂದಿಗೊಂದಿಗಳು ಹಾಗೂ ಕಾಡಿನ ಪ್ರದೇಶಗಳಲ್ಲಿ ತಾತ್ಕಾಲಿಕ ಇಸ್ಪೀಟ್ ಅಡ್ಡೆಗಳು ತಲೆ ಎತ್ತುತ್ತವೆ ಎಂಬ ಆರೋಪ ಕೇಳಿಬಂದಿದೆ. ಕಾರ್ಮಿಕರನ್ನು ಆಟಕ್ಕೆ ಆಕರ್ಷಿಸಿ, ಅವರ ಬೋನಸ್ ಹಣವನ್ನು ಕಳೆದುಕೊಳ್ಳುವಂತೆ ಮಾಡುವ ಇಂತಹ ಚಟುವಟಿಕೆಗಳು ಕುಟುಂಬಗಳ ದೀಪಾವಳಿ ಸಂಭ್ರಮವನ್ನೇ ಕಸಿದುಕೊಳ್ಳುವ ಅಪಾಯವಿದೆ. ಹಬ್ಬದ ಖರ್ಚಿಗೆಂದು ಬಂದ ಹಣ ಜೂಜಾಟದಲ್ಲಿ ಕರಗಿದರೆ, ಸಂಭ್ರಮದಿಂದ ಬೆಳಗಬೇಕಾದ ಮನೆಗಳಲ್ಲಿ ನಿರಾಸೆ ಆವರಿಸುವ ಆತಂಕ ವ್ಯಕ್ತವಾಗಿದೆ.
ಇಸ್ಪೀಟ್ ಅಡ್ಡೆಗಳ ವಿರುದ್ಧ ಪೊಲೀಸ್ ಇಲಾಖೆ ಕೇವಲ ಸಾಂಕೇತಿಕ ದಾಳಿ ನಡೆಸಿ ಪ್ರಕರಣ ದಾಖಲಿಸುವುದಕ್ಕಷ್ಟೇ ಸೀಮಿತವಾಗದೆ, ಹಬ್ಬದ ಅವಧಿಯಲ್ಲಿ ನಿರಂತರ ಕಟ್ಟುನಿಟ್ಟಿನ ಕ್ರಮಕ್ಕೆ ಮನವಿ ಮಾಡಿದ್ದಾರೆ. ಜನಸ್ನೇಹಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಮತ್ತು ಸ್ಥಳೀಯ ನಗರ ಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಕಾರ್ಮಿಕ ಕುಟುಂಬಗಳ ಹಿತದೃಷ್ಠಿಯಿಂದ ಗಮನ ಹರಿಸುವಂತೆ ಅಗ್ರಹಿಸಲಾಗಿದೆ.
- ಸಚಿವರನ್ನು ತಡೆದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ ಮೊದಲ ಪ್ರತಿಕ್ರಿಯೆ
- ಸೋನಿಯಾ ಗಾಂಧಿ ಆತ್ಮಕಥನ ‘Belonging’ ಮೊದಲ ನೋಟ ಹಂಚಿಕೆ
- ದಾಂಡೇಲಿಯಲ್ಲಿ ಕಾರ್ಮಿಕರ ಬೋನಸ್ಗೆ ಕನ್ನ ಹಾಕಲು ಸಜ್ಜಾಗುತ್ತಿವೆಯೇ ಇಸ್ಪೀಟ್ ಅಡ್ಡೆಗಳು?
- ದೇವರಗಟ್ಟು ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗ: ಓರ್ವ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
- ಅಂತರರಾಷ್ಟ್ರೀಯ ತೊದಲು ಜಾಗೃತಿ ದಿನ : ಪ್ರತಿಯೊಂದು ಧ್ವನಿಗೂ ಮೌಲ್ಯವಿದೆ






















