SK Home Ad
Home ಅಂಕಣ ಅಂಕಣ ಬರಹ |ದೆಹಲಿಯಲ್ಲಿ ಸಂಸದರ ಮಾತಿಗೆ ಬರ, ರಾಜ್ಯಕ್ಕೆ ಗರ

ಅಂಕಣ ಬರಹ |ದೆಹಲಿಯಲ್ಲಿ ಸಂಸದರ ಮಾತಿಗೆ ಬರ, ರಾಜ್ಯಕ್ಕೆ ಗರ

0
74
ದೆಹಲಿಯಲ್ಲಿ ಸಂಸದರ ಮೌನ, ಕರ್ನಾಟಕಕ್ಕೆ ಅನ್ಯಾಯ? ರಾಜ್ಯದ ಪರ ಧ್ವನಿ ಎತ್ತುವವರಾರು? ದೆಹಲಿಯಲ್ಲಿ ರಾಜ್ಯದ ಧ್ವನಿ ಕ್ಷೀಣವಾಗಿದೆಯೇ?

ಸಂಸದರು, ಕೇಂದ್ರದ ಸಚಿವರುಗಳು ರಾಜ್ಯದ ಪರ ಧ್ವನಿ ಎತ್ತಿ ಎಂದವರು ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಒಬ್ಬರೇ ಅಲ್ಲ. ಇದು ಕಳೆದ ಒಂದು, ಒಂದೂವರೆ ದಶಕಗಳಿಂದ ಆಗಾಗ ಕೇಳಿ ಬರುತ್ತಲೇ ಇರುವ ಕರ್ನಾಟಕದ ಮುಖ್ಯಮಂತ್ರಿಗಳ ಆಕ್ರೋಶದ ಧ್ವನಿ.

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಸಂಸದರೇ ರಾಜ್ಯದ ಪರ ಧ್ವನಿ ಎತ್ತಿ… ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರುಗಳೇ ರಾಜ್ಯಕ್ಕೆ ನ್ಯಾಯ ಕೊಡಿಸಿ… ಕರ್ನಾಟಕದ ಮುಖ್ಯಮಂತ್ರಿಯೇ ಈ ರೀತಿ ಕೋರಿಕೊಂಡಿದ್ದಾರೆ!

ರಾಜ್ಯದ ಸಚಿವರು, ಹಲವು ಶಾಸಕರೂ ಕೂಡ ಈಗ ಮುಖ್ಯಮಂತ್ರಿಗಳ ಮಾತನ್ನು ಬೆಂಬಲಿಸಿ ನಮ್ಮ ಸಂಸದರುಗಳಿಗೆ ಸಂಸತ್ತಿನಲ್ಲಿ ಧ್ವನಿ ಏಳುತ್ತಿಲ್ಲ, ಮಾತು ಬರುತ್ತಿಲ್ಲ, ಹಾಗಾಗಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ನೇರವಾಗಿಯೇ ಆರೋಪ ಮಾಡಿ, ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆಯನ್ನು ಹೊರಡಿಸಿ, ನೊಟೀಸ್ ನೀಡಿದಾಗ ಮುಖ್ಯಮಂತ್ರಿ ಹಾಗೂ ಇತರ ಸಚಿವರುಗಳೂ ಕೂಡ ವಿಶೇಷ ಅಧಿವೇಶನದಲ್ಲಿ, ಕೇಂದ್ರ ಸರ್ಕಾರ ನಮಗೆ ನ್ಯಾಯ ಕೊಡಬೇಕು. ಈ ಸಂಬಂಧ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳು, ಸಂಸದರು ಒಟ್ಟಾಗಿ ಧ್ವನಿ ಎತ್ತಬೇಕು, ಸಹ್ಯಾದ್ರಿ ತಪ್ಪಲಿನ ಮಕ್ಕಳ ಬದುಕಿನ ಭದ್ರತೆಗೆ ಆಸರೆಯಾಗಿ ನಿಲ್ಲಬೇಕು’ ಎಂದು ಆಗ್ರಹಿಸಿದ್ದರು.

ಆಗ ಪರೋಕ್ಷವಾಗಿ ವಿರೋಧ ಪಕ್ಷದ ಶಾಸಕರು, ಮುಖಂಡರು ಕೂಡ ಮೌನವಾಗಿ ಈ ಮಾತಿಗೆ ಸಹಮತವನ್ನು ವ್ಯಕ್ತಪಡಿಸಿದರೆ, ಗೌಪ್ಯವಾಗಿ ನಮ್ಮ ಸಂಸದರು ಇಂತಹ ಸಮಸ್ಯೆಗಳನ್ನು ಪ್ರಧಾನಿ ಮೋದಿ ಎದಿರು ಅಥವಾ ಕೇಂದ್ರದಲ್ಲಿ ಸಮರ್ಥವಾಗಿ ಪ್ರತಿಪಾದಿಸುತ್ತಿಲ್ಲ ಎಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸಂಸದರು, ಕೇಂದ್ರದ ಸಚಿವರುಗಳು ರಾಜ್ಯದ ಪರ ಧ್ವನಿ ಎತ್ತಿ ಎಂದವರು ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಒಬ್ಬರೇ ಅಲ್ಲ. ಇದು ಕಳೆದ ಒಂದು, ಒಂದೂವರೆ ದಶಕಗಳಿಂದ ಆಗಾಗ ಕೇಳಿ ಬರುತ್ತಲೇ ಇರುವ ಕರ್ನಾಟಕದ ಮುಖ್ಯಮಂತ್ರಿಗಳ ಆಕ್ರೋಶದ ಧ್ವನಿ.

ರಾಜ್ಯದ ಸಂಸದರು ಸಂಸತ್ತಿನಲ್ಲಿ ಧ್ವನಿಯೇ ಎತ್ತುತ್ತಿಲ್ಲ. ಇದಕ್ಕಾಗಿ ಕರ್ನಾಟಕದ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂಬುದು 1975ರಿಂದಲೂ ಇದ್ದೇ ಇರುವ ಮಾತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ರಾಜ್ಯದ ಸಂಸದರು, ಕೇಂದ್ರದಲ್ಲಿ ಸಚಿವರಾಗಿದ್ದವರು, ಇಂದಿರಾ ಎದಿರು ನಿಲ್ಲುತ್ತಿಲ್ಲ, ಮಾತನಾಡುವ ಧೈರ್ಯವಿಲ್ಲ, ಅಲ್ಲದೇ ಸಂಸದರು ಚಪ್ರಾಸಿಗಳಂತೆ ಆಗಿಬಿಟ್ಟಿದ್ದಾರೆ ಎಂದು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಹೇಳಿದ್ದರು.

ಇಂದಿರಾ ಗಾಂಧಿ ಕೂಡ ನನ್ನ ನಾಮ ಬಲದಿಂದ ಇವರೆಲ್ಲ ಆಯ್ಕೆಯಾಗುತ್ತಾರೆ ಎಂದು ಬಹಿರಂಗ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದರು.

ಈಗ, ಅದೇ ಮಾತನ್ನು ಪ್ರತಿಪಕ್ಷಗಳು ಆಡುತ್ತಿವೆ. ಮೋದಿ ಎದಿರು ನಿಲ್ಲುವ ಧೈರ್ಯವಿಲ್ಲ. ಸಂಸತ್ತಿನಲ್ಲಿ ಮಾತನಾಡುವ ತಾಕತ್ತಿಲ್ಲ. ರಾಜ್ಯದ ಸಮಸ್ಯೆಗಳನ್ನು ಹೇಳೋಣ ಎಂದರೆ ಕೇಂದ್ರದ ಸಚಿವರೆಲ್ಲ, ಪ್ರಧಾನಿ ಮತ್ತು ಗೃಹ ಸಚಿವರತ್ತ ಬೆರಳು ಮಾಡುತ್ತಾರೆ. ಪ್ರಧಾನಿ ಮೋದಿ ಅವರನ್ನು ಕಂಡರೆ ಸಂಸದರು, ಸಚಿವರು ಗಡಗಡ ನಡಗುತ್ತಾರೆ ಎಂದು ಸ್ವತಃ ರಾಜ್ಯದ ಸಚಿವರುಗಳೇ ಟೀಕೆ ಮಾಡಿದಾಗಲೂ, ಸಂಸರ‍್ಯಾರೂ ಪ್ರತಿಕ್ರಿಯಿಸುತ್ತಿಲ್ಲ.

ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಹಣಕಾಸು ಆಯೋಗ ಶಿಫಾರಸು ಮಾಡಿದ ಹಣ, ಜಿಎಸ್‌ಟಿ ಬಾಬ್ತು, ವಿವಿಧ ಯೋಜನೆಗಳ ಕೇಂದ್ರದ ಪಾಲು ಸೇರಿದಂತೆ ಸರಿಸುಮಾರು 1 ಲಕ್ಷ ಕೋಟಿಯಷ್ಟು ಕರ್ನಾಟಕಕ್ಕೆ ಬರಬೇಕಿದೆ. ಇದನ್ನು ಕೊಡಿಸಿ ಎಂದು ಸಿಎಂ ಪತ್ರ ಬರೆದಿದ್ದರೂ ದೆಹಲಿಯಿಂದ ಮಾತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿಯೇ, ಶಾಸಕರ- ಸಂಸದರ ಪ್ರತಿಭಟನೆ ನಡೆಸಿದ್ದರು. ಬಹಿರಂಗ ಸಮರವನ್ನೇ ಸಾರಿದ್ದರು.. ಆದರೂ ದಮ್ಮಡಿ ಕಾಸೂ ಹೆಚ್ಚುವರಿಯಾಗಿ ಬಂದಿಲ್ಲ.

ಪ್ರಸ್ತುತ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ಹದಿನೇಳು, ಕಾಂಗ್ರೆಸ್‌ನ 9, ಜೆಡಿಎಸ್‌ನ ಇಬ್ಬರು ಪ್ರತಿನಿಧಿಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ಐವರು ಬಿಜೆಪಿ, 7 ಕಾಂಗ್ರೆಸ್ ಸಂಸದರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾರೆ.

ನಿರ್ಮಲಾ ಸೀತಾರಾಮನ್ 2014ರಿಂದಲೂ ಕೇಂದ್ರದ ಪ್ರಭಾವಿ ಸಚಿವರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹಣಕಾಸು ಸಚಿವರೂ ಆಗಿದ್ದಾರೆ! ಹೆಸರಿಗೆ ದೇಶದ ಅರ್ಥಮಂತ್ರಿ ನಮ್ಮವರು.. ಆದರೆ ರಾಜ್ಯಕ್ಕೇನೂ ದಮ್ಮಡಿ ಪ್ರಯೋಜನವಿಲ್ಲ ಎಂದು ಅವರ ಸಂಸದರೇ ಮೂಗು ಮುರಿಯುತ್ತಾರೆ.

ಪ್ರಲ್ಹಾದ ಜೋಶಿ ಕಳೆದ ಏಳು ವರ್ಷಗಳಿಂದ ಕ್ಯಾಬಿನೆಟ್ ಸಚಿವರಾಗಿ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಈಗ ದೇಶದ ಶಿಕ್ಷಣ ಮಂತ್ರಿಯೂ ಆಗಿದ್ದಾರೆ. ಧಾರವಾಡಕ್ಕೆ ಐಐಟಿ ಸ್ಥಾಪಿಸಿದ ಶ್ರೇಯ ಅವರದ್ದೇ. ಹುಬ್ಬಳ್ಳಿಯ ಬೈಪಾಸ್, ನಗರದ ಫ್ಲೈ ಓವರ್ ಕುಂಟುತ್ತ ಸಾಗಿದರೂ ಕೂಡ ಈ ಯೋಜನೆಗಳೂ ಜೋಶಿ ಅವರ ಯತ್ನದಿಂದ ಬಂದಂಥವೇ. ಹಾಗೇ ಉತ್ತರ ಕರ್ನಾಟಕದ ಹಲವು ಹೆದ್ದಾರಿಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಜೋಶಿ ಕೊಡುಗೆ ಮತ್ತು ಸ್ಪಂದನೆಗಳಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ನಾಯಕರಾಗಿ, ಸಚಿವರಾಗಿದ್ದ ಅನಂತಕುಮಾರ್ ಅವರ ಚರಿಷ್ಮಾದ ಹಿನ್ನೆಲೆಯಲ್ಲೇ ಜೋಶಿಯವರನ್ನು ಅಳೆಯಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾದಿಯಾಗಿ ಹಲವು ಸಚಿವರು ದೆಹಲಿಗೆ ಹೋದಾಗಲೆಲ್ಲ ಜೋಶಿ ಅವರೇ ರಾಜ್ಯ-ಕೇಂದ್ರದ ನಡುವಿನ ಸೇತುವಾಗುತ್ತಾರೆ ಎನ್ನುವುದು ನಿಜ.

ಆದರೆ ಜಲ ವಿವಾದ, ವಿಶೇಷವಾಗಿ ಮಹದಾಯಿ ಸಮಸ್ಯೆ, ಕೃಷ್ಣಾ ಮೇಲ್ದಂಡೆ ಗೆಜೆಟ್ ಪ್ರಕಟಣೆ, ರಾಜ್ಯದ ಹಲವು ಬೇಡಿಕೆಗಳಿಗೆ ಜೋಶಿ ಮನಸ್ಸು ಮಾಡಿದ್ದರೆ.. ಎಂದು ಉದ್ದದ ಪಟ್ಟಿಯನ್ನೇ ಕರ್ನಾಟಕ ನೀಡುತ್ತದೆ. ಹಾಗಂತ ಜೋಶಿ ಮನಸ್ಸು ಮಾಡಿಲ್ಲ ಎಂದು ಬೆರಳು ತೋರಿಸುವಂತಿಲ್ಲ.

ಪ್ರಲ್ಹಾದ ಜೋಶಿ ಈಗ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನ್ನಾ ಕೊಟ್ಟ ರೈತ ಬಂದು, ನಿಮ್ಮ ಮನೆ ಮುಂದೆ ನಿಂತೇವಿ ಎನ್ನುತ್ತ ಬೃಹತ್ ಪ್ರತಿಭಟನೆಯೇ ಅವರ ಕ್ಷೇತ್ರದಲ್ಲಿ ಜರುತ್ತಿದೆ. ಪ್ರಸ್ತುತ ಎನ್‌ಡಿಎ ಭಾಗವಾಗಿರುವ ಮಾಜಿ ಪ್ರಧಾನಿ ಪುತ್ರ, ಮಾಜಿ ಸಿಎಂ, ಎಚ್.ಕೆ. ಕುಮಾರಸ್ವಾಮಿ ದೇಶದ ಬೃಹತ್ ಕೈಗಾರಿಕೆ ಮಂತ್ರಿಯಾಗಿದ್ದಾರೆ. ಅಲ್ಲದೇ ಆರ್ಥಿಕ ಸಂಪುಟ ಸಮಿತಿಯ ಸದಸ್ಯರು ಕೂಡಾ!!

ಬೆಂಗಳೂರು ಕೇಂದ್ರೀಕರಿಸಿ ರಾಜ್ಯ ರಾಜಕಾರಣದ ವಿಷಯಗಳಿಗೆ ಹೋರಾಟಕ್ಕೆ ಇಳಿದಿದ್ದಾರೆ. ಬಿಡದಿ ಟೌನ್‌ಶಿಪ್, ನೈಸ್ ವಿವಾದ, ಈಗ ಸ್ಟಿಂಗ್ ಆಪರೇಷನ್ ಇತ್ಯಾದಿಗಳನ್ನಿಟ್ಟುಕೊಂಡು ರಾಜ್ಯ ಬಿಟ್ಟು ಕದಲುತ್ತಿಲ್ಲ.

ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದೂ ಬೆಂಗಳೂರಿನಲ್ಲೇಕೆ ಇರುತ್ತೀರಿ? ಯಾವ ಹೊಸ ಯೋಜನೆಗಳನ್ನು ತಂದಿದ್ದೀರಿ? ರಾಜ್ಯಕ್ಕೊಂದಿಷ್ಟು ಯೋಜನೆಗಳನ್ನು ತನ್ನಿ, ನಿಮ್ಮ ಮಂಡ್ಯ ಕ್ಷೇತ್ರದಲ್ಲಿಯೇ ಬೃಹತ್ ಉದ್ಯಮ ಸ್ಥಾಪಿಸಿ ಎನ್ನುವ ಮಟ್ಟಿಗೆ ಮುಖ್ಯಮಂತ್ರಿಗಳೇ ಪಂಥಾಹ್ವಾನ ನೀಡಿದ್ದಾರೆ.

ಕುಮಾರಸ್ವಾಮಿ ಅವರೂ ಹಿಡಿದ ಪಟ್ಟು ಬಿಡುವವರಲ್ಲ. 2028ರ ನಂತರ ನಮ್ಮದೇ ಸರ್ಕಾರ, ಆಗ ನೋಡಿಕೊಳ್ಳುತ್ತೇನೆ ಎನ್ನುತ್ತ ಡಿ.ಕೆ ಹಾಗೂ ವಿಎಸ್‌ವೈಗೂ ತೊಡೆ ತಟ್ಟಿದ್ದಾರೆ.

ಮಾಜಿ ಸಿಎಂ ಮೇಲೇ ಸ್ಟಿಂಗ್ ನಡೆಸಲಾಯಿತೆಂಬ ಅಲ್ಲೋಲ ಕಲ್ಲೋಲ ಎಬ್ಬಿಸುವ ಸುದ್ದಿಯನ್ನೀಗ ಬಹಿರಂಗಪಡಿಸಿ ನೈತಿಕ-ಅನೈತಿಕ ರಾಜಕಾರಣದ ಪ್ರಶ್ನೆ ಎತ್ತಿ ಇಕ್ಕಟ್ಟಿಗೆ ಸಿಲುಕಿಸಿರುವುದು ನಿಜ. ಇದಿನ್ನೂ ಯಾವ ಹಂತಕ್ಕೆ ಹೋಗುತ್ತದೋ ಗೊತ್ತಿಲ್ಲ.

ಕುಮಾರಸ್ವಾಮಿಯವರು ಕೈಗಾರಿಕಾ ಸಚಿವರಾದ ನಂತರ ಭದ್ರಾವತಿಯ ವಿಎಸ್‌ಐಎಲ್ ಲಾಭದತ್ತ ಹೆಜ್ಜೆಯನ್ನಿಟ್ಟಿದೆ. ಸಾರ್ವಜನಿಕ ಉದ್ದಿಮೆಗಳ ಆಸ್ತಿಪಾಸ್ತಿ ರಕ್ಷಣೆ ಜೊತೆಗೆ, ಉತ್ಪಾದನೆಯಲ್ಲಿ ಪ್ರಗತಿ ಕಂಡಿವೆ.

ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ರಾಜ್ಯದಲ್ಲೇನೋ ಓಡಾಡುತ್ತಿದ್ದಾರೆ. ತಮ್ಮ ಸಾಮರ್ಥ್ಯಕ್ಕನುಸಾರ, ತಮಗಿರುವ ವ್ಯಾಪ್ತಿಯನ್ನು ಪರಿಗಣಿಸಿ ಶ್ರಮ ವಹಿಸಿದ್ದಾರೆ. ಅವರೇ ಹಲವರಲ್ಲಿ ಹೇಳಿಕೊಂಡಂತೆ, ರೈಲ್ವೆ ಸಂಪುಟ ದರ್ಜೆ ಸಚಿವರೇ ಕಡತ ಬಿಡಿ ಅಭಿಪ್ರಾಯವನ್ನೂ ಆಲಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದೂ ಉಂಟು. ಅಂತೂ ಅವರಿಂದಲೇ ಕೇರಳದ ಪಾಲಕ್ಕಾಡ್‌ನಲ್ಲಿದ್ದ ಮಂಗಳೂರು ನೈಋತ್ಯ ರೈಲ್ವೆ ವ್ಯಾಪ್ತಿಗೆ ಬಂದು ಮೈಸೂರು ವಿಭಾಗಕ್ಕೆ ಸೇರುವಂತಾಯಿತು.

ದಿವಂಗತ ಸುರೇಶ್ ಅಂಗಡಿಯವರ ಕನಸಿನ ಧಾರವಾಡ-ಬೆಳಗಾವಿ ಯೋಜನೆ ಅಡಿಗಲ್ಲನ್ನಿಟ್ಟು ನಾಲ್ಕೈದು ವರ್ಷವಾದರೂ ಒಂದು ಹೆಜ್ಜೆ ಮುಂದಡಿ ಇಟ್ಟಿಲ್ಲ. ತಾಳಗುಪ್ಪ-ಶಿರಸಿ-ಹಾವೇರಿ ರೈಲು ಯೋಜನೆ ಇನ್ನೂ ಸಮೀಕ್ಷೆ ಹಂತದಲ್ಲಿಯೇ ಇವೆ.

ಶೋಭಾ ಕರಂದ್ಲಾಜೆಯವರು ಕೇಂದ್ರದ ಕಾರ್ಮಿಕ ಮತ್ತು ಎಂಎಸ್‌ಎಂಇ ಸಚಿವರು. ಬಹುತೇಕರಿಗೆ ಶೋಭಾರ ಖಾತೆ ಯಾವುದೆಂಬುದೇ ಮರೆತು ಹೋಗಿದೆ!.

ಅವರಿಗಾದರೂ ನೆನಪಿದೆಯೇ ಎಂದೂ ವ್ಯಂಗ್ಯವಾಡಿದ್ದರು!. ಶೋಭಾ ಅವರೂ ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ, ತಮ್ಮ ಸಾಧನೆ ಕುರಿತು ಹೇಳಿಕೊಂಡಿದ್ದು ಯಾರೂ ಕೇಳಿಲ್ಲ. ದೆಹಲಿಯ ಅವರ ಕಚೇರಿಗೆ ವರ್ಷಕ್ಕೆಷ್ಟು ಕಡತ ಬಂದವು ಎಂಬುದರ ಮಾಹಿತಿಯೂ ಲಭ್ಯವಿಲ್ಲ.

ರಾಜ್ಯ ಸರ್ಕಾರದ ವಿರೋಧವಾಗಿ ಮತ್ತು ಬಿಜೆಪಿ ಪ್ರಾಯೋಜಿತ ಸಭೆ ಹಾಗೂ ಹೋರಾಟಗಳಿಗೆ ಪಾಲ್ಗೊಳ್ಳುವ ಅವರು ರಾಜ್ಯದ ಬೇಡಿಕೆಗಳು ಮತ್ತು ಜನರ ಆಶೋತ್ತರಗಳಿಗೆ ಕೇಂದ್ರದಲ್ಲಿ ಧ್ವನಿ ಎತ್ತಿದ್ದು ಕಡಿಮೆಯೇ. ಅವರ ಕ್ಷೇತ್ರದ ಜನತೆಗೂ ಕೂಡ ತಮ್ಮ ಸಚಿವ ಖಾತೆಯಿಂದ ಪ್ರಯೋಜನ ದೊರಕಿದ್ದೇಷ್ಟೋ!?

ಸಂಸದರೇ ರಾಜ್ಯದ ಸಮಸ್ಯೆಗಳನ್ನು ದೆಹಲಿಯಲ್ಲಿ ಬಿಂಬಿಸಿ ಎನ್ನುವ ಕೂಗು ಕೇವಲ ರಾಜ್ಯ ಸರ್ಕಾರ ಅಥವಾ ವಿಪಕ್ಷದ್ದಷ್ಟೇ ಅಲ್ಲ. ಗುಣಮಟ್ಟ, ಸಂಸದರ ಕಾರ್ಯವೈಖರಿ ಬಗ್ಗೆ ಈಗಂತೂ ತಳಮಟ್ಟದಲ್ಲೂ ತುಲನೆ ಮಾಡಲಾಗುತ್ತಿದೆ.

ನಾವು ಮಾತನಾಡುತ್ತಿಲ್ಲವೇ…? ಎಂದು ಮರು ಉತ್ತರ ನೀಡುವ ಸಂಸದ ತೇಜಸ್ವಿ ಸೂರ್ಯ ಪಕ್ಷದ ನೀತಿ ಸಿದ್ಧಾಂತ, ಮೋದಿ ಸಮರ್ಥನೆ, ದೇಶ-ವಿದೇಶದ ವಿದ್ಯಮಾನಗಳಿಗೇ ಚಾಣಾಕ್ಷ”ತನಕ್ಕೆ ಬಿಂಬಿಸಿಕೊಳ್ಳುತ್ತಿದ್ದರೆ, ಮಾಜಿ ಮುಖ್ಯಮಂತ್ತಿ ಬಸವರಾಜ ಬೊಮ್ಮಾಯಿ ಸಂಸದೀಯ ಚರ್ಚೆಗಳಿಗಷ್ಟೇ ತಮ್ಮ ಬುದ್ದಿ ಸೀಮಿತಗೊಳಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ (ಕಳೆದ ಫೆಬ್ರವರಿಯಲ್ಲಿ) ಪ್ರಕಟವಾದ ವರದಿಯ ಪ್ರಕಾರ ಕರ್ನಾಟಕದ ನಾಲ್ವರು ಸಂಸದರು ಒಂದೇ ಒಂದು ಪದವನ್ನೂ ಸಂಸತ್ತಿನಲ್ಲಿ ಮಾತನಾಡಿಲ್ಲ. ಹಿಂದಿನ ಐದು ವರ್ಷಗಳಲ್ಲಿ ಕೂಡ ಅದೇ ರೀತಿ ನಾಲ್ವರು ಸಂಸದರು ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಮಾತನಾಡಿಲ್ಲ! ಕಾಂಗ್ರೆಸ್ ಸಂಸದರೂ ಅಷ್ಟೇ ಖರ್ಗೆ ಅವರ ಮೇಲೆ ಭಾರ ಹಾಕಿ ತೆಪ್ಪಗಿದ್ದಾರೆನ್ನಬಹುದು..!

ರಾಜ್ಯ ನೂರೈವತ್ತು ವರ್ಷಗಳಿಂದ ಕಾಣದ, ಬರವನ್ನು ಎದುರಿಸುತ್ತಿದೆ. ಜಲಮೂಲಗಳು, ಜಲಾಶಯಗಳು ಬತ್ತಿ ಹೋಗಿವೆ. ಈ ಸ್ಥಿತಿಯಲ್ಲಿ ಸಂಸದರುಗಳು ಒಗ್ಗಟ್ಟಾಗಬೇಕಿದೆ. ರಾಜ್ಯದ ಪರ ಧ್ವನಿ ಎತ್ತಬೇಕಿದೆ. ಕೇಂದ್ರದ ಮಟ್ಟದಲ್ಲಿರುವ ಯೋಜನೆಗಳನ್ನು ತರಬೇಕಿದೆ. ಕೇಂದ್ರ ಮಾಡಬೇಕಾದ ಕೆಲಸಗಳಿಗೆ ಧ್ವನಿಯಾಗಬೇಕಿದೆ. ಸಂಸದರೇ ಮಾತನಾಡಿ, ಕೆಲಸ ಮಾಡಿ, ನಮ್ಮನ್ನು ನೈಜ ಅರ್ಥದಲ್ಲಿ ಪ್ರತಿನಿಧಿಸಿ ಎನ್ನುವ ಮಟ್ಟಕ್ಕೆ ಮತದಾರ ಬರಬಾರದಲ್ಲವೇ?