SK Home Ad
Home ನಮ್ಮ ಜಿಲ್ಲೆ ಧಾರವಾಡ ಒಪಿಎಸ್ ಮರುಜಾರಿಗೆ ಸರ್ಕಾರ ಬದ್ಧ: ಬಸವರಾಜ ಗುರಿಕಾರ

ಒಪಿಎಸ್ ಮರುಜಾರಿಗೆ ಸರ್ಕಾರ ಬದ್ಧ: ಬಸವರಾಜ ಗುರಿಕಾರ

0
60

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರಿಗೆ ಪ್ರಥಮ ಪ್ರಾಶಶ್ತ್ಯದ ಮತವನ್ನು ಪದವೀಧರ ಮತದಾರರು ನೀಡಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅವಧಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಬಗ್ಗೆ ಶಿಕ್ಷಕರು, ಪದವೀಧರರು ಒಲವು ತೋರಿದ್ದಾರೆ. ರಾಜ್ಯ ಸರ್ಕಾರದ ಪ್ರಗತಿಪರ ಕಾರ್ಯ ಹಾಗೂ ಅಭ್ಯರ್ಥಿಯ ಸಾಧನೆ ಗುರುತಿಸಿ ಅವರನ್ನು ಗೆಲ್ಲಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಪಶ್ಚಿಮ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಯಲ್ಲಿ ಒಟ್ಟು 97,400 ಮತದಾರರು ಇದ್ದಾರೆ. ಧಾರವಾಡ ಜಿಲ್ಲೆಯಲ್ಲಿ 35 ಸಾವಿರ, ಹಾವೇರಿಯಲ್ಲಿ 24 ಸಾವಿರ, ಉತ್ತರ ಕನ್ನಡದಲ್ಲಿ 16 ಸಾವಿರ ಮತ್ತು ಗದಗ ಜಿಲ್ಲೆಯಲ್ಲಿ 21 ಸಾವಿರ ಮತದಾರರು ಇದ್ದಾರೆ. ಈಗಾಗಲೇ ಎಲ್ಲ ಕಡೆ ಪಕ್ಷದ ಮುಖಂಡರು ಪ್ರಚಾರ ಮಡೆಸುತ್ತಿದ್ದು, ಗೆಲುವಿನ ಮುನ್ಸೂಚನೆ ದೊರೆತಿದೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯು ಜನಪ್ರಿಯತೆಗೆ ಕಾರಣವಾಗಿದೆ. ಪದವೀಧರರಿಗೆ ಕೌಶಲಾಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಉದ್ಯೋಗ ಮೇಳ ಆಯೋಜಿಸಿ, ಉದ್ಯೋಗ ನೀಡುತ್ತಿದೆ. ಪದವೀಧರರ ಹಾಗೂ ನೌಕರರ ಹಿತಾಸಕ್ತಿ ಕಾಪಾಡಲು ಸದಾ ಸಿದ್ಧವಿದೆ. ಯುವನಿಧಿ ಯೋಜನೆಯಡಿ ಪದವೀಧರರಿಗೆ ಧನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಯಾವಾಗಲೂ ಪದವೀಧರರ ಮತ್ತು ಶಿಕ್ಷಕರ ಪರವಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಒಪಿಎಸ್ ಮರು ಜಾರಿಗೆ ಸಮಿತಿ ರಚಿಸಿದ್ದು, ಸಮಿತಿ ತನ್ನ ವರದಿಯನ್ನು ಶೀಘ್ರದಲ್ಲಿ ನೀಡಲಿದ್ದು, ನಮ್ಮ ಸರ್ಕಾರ ಒಪಿಎಸ್ ಜಾರಿಗೆ ಬದ್ಧವಾಗಿದೆ. ರಾಜ್ಯದಾದ್ಯಂತ 56,452 ಉದ್ಯೋಗ ಭರ್ತಿಗೆ ಈಗಾಗಲೇ ಕ್ರಮ ವಹಿಸಿದೆ ಎಂದು ಹೇಳಿದರು.

ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಟಿ.ಆರ್. ಶಿರೋಳ, ವಿ.ಎಸ್. ಚೌಕಿಮಠ, ಎಂ.ಎಂ. ಗಿರಣಿವಡ್ಡರ ಇದ್ದರು.