SK Home Ad
Home ಸಿನಿ ಮಿಲ್ಸ್ ಸನ್ನಿ ಡಿಯೋಲ್ ಹೊಸ ಅವತಾರದ ‘ಸೂರ್ಯಾ’ ಟೀಸರ್ ಬಿಡುಗಡೆ

ಸನ್ನಿ ಡಿಯೋಲ್ ಹೊಸ ಅವತಾರದ ‘ಸೂರ್ಯಾ’ ಟೀಸರ್ ಬಿಡುಗಡೆ

0
43
ಭೂತಕಾಲದ ನೋವು, ತನಿಖೆ ಮತ್ತು ನ್ಯಾಯದ ಹೋರಾಟ: ಸನ್ನಿ ಡಿಯೋಲ್‌ರ ‘ಸೂರ್ಯಾ’ ಟೀಸರ್ ಔಟ್

ವೈದ್ಯಕೀಯ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ಸನ್ನಿ ಡಿಯೋಲ್ ಸಮರ; ‘ಸೂರ್ಯಾ’ ಟೀಸರ್ ಬಿಡುಗಡೆ

ಮುಂಬೈ: ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ತಮ್ಮ ಮುಂಬರುವ ಕ್ರೈಂ ಥ್ರಿಲ್ಲರ್ ಚಿತ್ರ ‘ಸೂರ್ಯಾ: ಅಂತ್ ಸೆ ಆರಂಭ್ ತಕ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ. ವೈದ್ಯಕೀಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ನ್ಯಾಯಕ್ಕಾಗಿ ಹೋರಾಟ ಮತ್ತು ವೈಯಕ್ತಿಕ ನೋವಿನ ಸುತ್ತ ಕಥೆ ಸಾಗುವ ಸುಳಿವನ್ನು ಟೀಸರ್ ನೀಡಿದೆ.

ಸನ್ನಿ ಡಿಯೋಲ್ ಅವರ ಜನ್ಮದಿನದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಟೀಸರ್‌ನಲ್ಲಿ ಅವರು ಗಂಭೀರ ಹಾಗೂ ಒರಟಾದ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರನ್ನು ದೇವರಂತೆ ನಂಬುವ ಸಾಮಾನ್ಯ ಜನರ ವಿಶ್ವಾಸಕ್ಕೆ ಧಕ್ಕೆಯಾದರೆ ಏನಾಗುತ್ತದೆ ಎಂಬ ಪ್ರಶ್ನೆಯೊಂದಿಗೆ ಟೀಸರ್ ಆರಂಭವಾಗುತ್ತದೆ. ರೋಗಿಗಳಿಂದ ಅನಗತ್ಯ ಪರೀಕ್ಷೆಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವುದು, ವೈದ್ಯಕೀಯ ಸೇವೆಗಳಲ್ಲಿನ ಕಮಿಷನ್‌ಗಳಂತಹ ಸಮಸ್ಯೆಗಳ ಬಗ್ಗೆ ನಾಯಕನ ಪಾತ್ರ ಪ್ರಶ್ನೆ ಎತ್ತುತ್ತದೆ. ಈ ಹೋರಾಟದ ನಡುವೆ ನ್ಯಾಯವನ್ನು ಕಂಡುಕೊಳ್ಳಲು ಆತ ಮುಂದಾಗುವ ಕಥೆಯ ಸುಳಿವು ಸಿಗುತ್ತದೆ.

2018ರಲ್ಲಿ ಬಿಡುಗಡೆಯಾದ ಮಲಯಾಳಂ ಕ್ರೈಂ ಥ್ರಿಲ್ಲರ್ ‘ಜೋಸೆಫ್’ ಚಿತ್ರದ ಹಿಂದಿ ರೂಪಾಂತರವಾಗಿರುವ ‘ಸೂರ್ಯಾ’ ಚಿತ್ರವನ್ನು ಎಂ. ಪದ್ಮಕುಮಾರ್ ನಿರ್ದೇಶಿಸಿದ್ದಾರೆ. ಇದು ಅವರ ಬಾಲಿವುಡ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಮೂಲ ‘ಜೋಸೆಫ್’ ಚಿತ್ರವನ್ನು ಶಾಹಿ ಕಬೀರ್ ಬರೆದಿದ್ದರು.

ಕನ್ನಡದಲ್ಲಿ ಕಲರವ್‌ ಮೂಡಿಸಿದ್ದ ‘ರವಿ ಬೋಪಣ್ಣ’ : 2018ರಲ್ಲಿ ಬಿಡುಗಡೆಯಾಗಿ ವಿಮರ್ಶಕರಿಂದ ಭಾರಿ ಮೆಚ್ಚುಗೆ ಗಳಿಸಿದ್ದ ಜೋಜು ಜಾರ್ಜ್ ನಟನೆಯ ‘ಜೋಸೆಫ್’ (Joseph) ಎಂಬ ಮಲಯಾಳಂ ಹಿಟ್ ಚಿತ್ರದ ಕಥೆಯ ತಿರುಳನ್ನು ರವಿಚಂದ್ರನ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯ ಬಣ್ಣಗಳು, ಸಂಗೀತ, ಪ್ರೇಮ ಮತ್ತು ಶೃಂಗಾರದ ದೃಶ್ಯಗಳನ್ನು ಸೇರಿಸಿ ಚಿತ್ರವನ್ನು ಹೊಸದಾಗಿ ತೆರೆಗೆ ತಂದಿದ್ದರು. ಅಲ್ಲದೆ, ಅವರದ್ದೇ ಆದ ಕೆಲವು ಹಳೆಯ ಚಿತ್ರಗಳ ಶೈಲಿಯ ಛಾಯೆಯೂ ಇದರಲ್ಲಿ ಕಾಣುವಂತೆ ಮಾಡಿದ್ದರು. ಚಿತ್ರದಲ್ಲಿ ವಿ. ರವಿಚಂದ್ರನ್, ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಜೈ ಜಗದೀಶ್, ರವಿಶಂಕರ್ ಗೌಡ, ಮತ್ತು ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದರು. ಈ ಚಿತ್ರಕ್ಕೆ ವಿ. ರವಿಚಂದ್ರನ್ ಅವರೇ ಸಂಗೀತ ಸಂಯೋಜನೆ ಹಾಗೂ ನಿರ್ಮಾಣವನ್ನೂ ಮಾಡಿದ್ದರು.

ಇನ್ನು ಸನ್ನಿ ಡಿಯೋಲ್‌ರವರ ಸೂರ್ಯಾ ಅಂತ್ ಸೆ ಆರಂಭ್ ತಕ್’ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ರವಿ ಕಿಶನ್, ಪ್ರಜ್ಞಾ ಜೈಸ್ವಾಲ್, ಜಿಷು ಸೇನ್‌ಗುಪ್ತ, ಟಿನು ಆನಂದ್, ಮನೀಶ್ ವಾಧ್ವಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಕಥೆಯು ವಿಭಿನ್ನ ಕಾಲಘಟ್ಟಗಳು, ತನಿಖೆ, ಭಾವನಾತ್ಮಕ ಸಂಘರ್ಷ ಮತ್ತು ಆಕ್ಷನ್ ಅಂಶಗಳನ್ನು ಒಳಗೊಂಡಿದೆ ಎಂದು ಚಿತ್ರತಂಡದ ಪ್ರಚಾರ ಮಾಹಿತಿ ಸೂಚಿಸುತ್ತದೆ.

‘ಬಾರ್ಡರ್’, ‘ಗದರ್’ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿರುವ ಸನ್ನಿ ಡಿಯೋಲ್ ಈ ಬಾರಿ ವಿಭಿನ್ನ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದಲ್ಲಿ ವೈದ್ಯಕೀಯ ವ್ಯವಸ್ಥೆಯ ಸಮಸ್ಯೆಗಳನ್ನು ಹೇಗೆ ನಿರೂಪಿಸಲಾಗುತ್ತದೆ ಎಂಬ ಕುತೂಹಲವೂ ಮೂಡಿದೆ.

ಕಮಲ್ ಮುಕುಟ್ ಪ್ರಸ್ತುತಪಡಿಸಿರುವ ಈ ಚಿತ್ರವನ್ನು ದೀಪಕ್ ಮುಕುಟ್, ಹೆಮ್ಮಂತ್ ಮುಕುಟ್ ಮತ್ತು ಲೋಕೇಶ್ ಮುಕುಟ್ ನಿರ್ಮಿಸಿದ್ದಾರೆ. ‘ಸೂರ್ಯಾ: ಅಂತ್ ಸೆ ಆರಂಭ್ ತಕ್’ ಚಿತ್ರವು 2026ರ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.