ಗದಗ: ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸತ್ಯದ ಆಳಕ್ಕೆ ಹೋಗಬೇಕಾದರೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಅವರೇ ಪ್ರಸ್ತಾಪಿಸಿ ತನಿಖೆ ನಡೆಸದಿದ್ದರೆ ಅವರ ಮೇಲೆಯೇ ಸಂಶಯ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ವಿಚಾರವನ್ನು ಮುಖ್ಯಮಂತ್ರಿಗಳೇ ಪ್ರಾರಂಭ ಮಾಡಿದ್ದರಿಂದ ಈ ಸಮಸ್ಯೆಯ ಸತ್ಯದ ತಳಮಟ್ಟಕ್ಕೆ ಹೋಗಬೇಕಾದರೆ ಮುಖ್ಯಮಂತ್ರಿಗಳೇ ಇದನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಒಂದು ಹೇಳಿಕೆ ಕೊಟ್ಟು, ಆಮೇಲೆ ಸುಮ್ಮನೆ ಆರಾಮಾಗಿ ಓಡಾಡಿಕೊಂಡು ಮಜಾ ಮಾಡುವುದಲ್ಲ ಇದು, ಬಹಳ ಗಂಭೀರವಾದ ವಿಚಾರ ಇದೆ. ಸಂಪುಟದಲ್ಲಿ ತಮ್ಮ ಸಹೋದ್ಯೋಗಿಗಳ ಬಗ್ಗೆ ಮಾತನಾಡಿ, ಈಗ ಸುಮ್ಮನಾದರೆ ಅವರ ಪರಿಸ್ಥಿರಿ ಏನಾಗುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು, ಆಮೇಲೆ ತನಿಖೆ ಮಾಡಬೇಕು, ಇಲ್ಲದೆ ಇದ್ದರೆ ಇದೇ ತರ ಮುಂದುವರೆದರೆ ಅವರ ಮೇಲೆ ಸಂಶಯದ ಚಿನ್ಹೆಗಳು ಬರುತ್ತದೆ ಅದಕ್ಕೆ ಅವಕಾಶ ಕೊಟ್ಟ ಹಾಗೆ ಆಗುತ್ತದೆ ಎಂದರು.
ಸುಳ್ಳು ಸುದ್ದಿ ವಿರುದ್ಧ ತನಿಖೆ: ಯೂಟ್ಯೂಬ್ ಅಥವಾ ಇತರ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಫಾರ್ವರ್ಡ್ ಮಾಡುವುದರ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದ್ದು, ಇದರ ಬಗ್ಗೆಯೂ ನಿಖರವಾದ ತನಿಖೆ ನಡೆಸುವ ಅಗತ್ಯವಿದೆ. ಮಾಧ್ಯಮಗಳು ಮತ್ತು ಪತ್ರಕರ್ತರು ವಾಸ್ತವ ಹಾಗೂ ಸತ್ಯವಾದ ಸಂಗತಿಗಳನ್ನು ವರದಿ ಮಾಡಬೇಕೇ ಹೊರತು, ಸುಳ್ಳು ಸುದ್ದಿಗಳನ್ನು ಅಥವಾ ಆಧಾರರಹಿತ ವಿಷಯಗಳನ್ನು ಬಿತ್ತರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅದರ ಮುಖಂಡರು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ಯಾವುದೇ ವಿಚಾರದಲ್ಲಿ ಗಂಭೀರವಾದ ತನಿಖೆಗಳು ನಡೆಯಬೇಕು ಮತ್ತು ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಕೇವಲ ಮೇಲ್ಮೈಯಲ್ಲಿ ತನಿಖೆ ಆರಂಭಿಸಿ ಸುಮ್ಮನಿರದೆ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೀಸಲಾತಿ ನ್ಯಾಯ ಸಿಗುವ ವಿಶ್ವಾಸ: ರಾಜ್ಯದಲ್ಲಿ ಎಸ್ಸಿ ಮೀಸಲಾತಿ ಹೆಚ್ಚಳ ರದ್ದು ಪಡಿಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ರಾಜ್ಯಗಳಲ್ಲಿರುವ ಮೀಸಲಾತಿ ಹಾಗೂ ಸಂವಿಧಾನಾತ್ಮಕ ತಿದ್ದುಪಡಿಗಳು ಕಾನೂನು ತಜ್ಞರ ಸಮಾಲೋಚನೆ ಮತ್ತು ಎಲ್ಲ ಪಕ್ಷಗಳ ವಿಶ್ವಾಸವನ್ನು ಪಡೆದು ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡಿಸಿದರೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ ಈಗ ತಮಿಳುನಾಡಿನಲ್ಲಿ ಶೇ. 63%, ರಷ್ಟಿದೆ. ಛತ್ತೀಸ್ಗಢದಲ್ಲಿ ಜಾರ್ಖಂಡ್ನಲ್ಲೂ ಇದೆ, ಹಲವಾರು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50% ಮಿತಿ ದಾಟಬಾರದು ಅಂತ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಮೇಲೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ. 10% ರಷ್ಟು ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಲಾಯಿತು. ಹೀಗಾಗಿ ಈಗ ಮೀಸಲಾತಿ ಪ್ರಮಾಣ ಶೇ. 60% ಆಗುತ್ತದೆ, ನಾವು ನಾಗ ಮೋಹನ್ ದಾಸ್ ಅವರ ವರದಿ ಆಧರಿಸಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರಾಜ್ಯ ಸರ್ಕಾರ ಅದನ್ನ ಹೈಕೋರ್ಟ್ನಲ್ಲಿ ಸರಿಯಾಗಿ ವಾದವನ್ನು ಮಾಡಲಿಲ್ಲ. ಹೀಗಾಗಿ ಅದೆಲ್ಲ ವಿಚಾರಗಳನ್ನು ಇಟ್ಟುಕೊಂಡು ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಿದರೆ, ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ: ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಸೋಲಿನ ಹತಾಶೆಯಿಂದ ಚುನಾವಣಾ ಆಯೋಗ ಹಾಗೂ ಇವಿಎಂ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದ್ದು, ತಾವು ಯಾವಾಗಲೂ ಸಂವಿಧಾನಾತ್ಮಕ ಸಂಸ್ಥೆಗಳಿಗೆ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಗೌರವ ನೀಡಿ ಮುಂದುವರಿದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ಸಿಜೆಪಿ ಎರಡೂ ಒಂದೇ ಎನ್ನುವ ರೀತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಸಿಜೆಪಿ ಮಟ್ಟಕ್ಕೆ ಇಳಿದಿದೆ. ಅವರು ಹೇಳಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ.






















