ಮೈಸೂರು: ಮೀನುಗಾರಿಕೆ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ರೈತರಿಗೆ ಪೂರಕ ಆದಾಯ ತಂದುಕೊಡುವ ನೂತನ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ತಲುಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ಇವರ ಜಂಟಿ ಆಶ್ರಯದಲ್ಲಿ ʻರೈತ ದಸರಾʼ ಅಂಗವಾಗಿ ಏರ್ಪಡಿಸಲಾಗಿದ್ದ ʻಮೀನುಗಾರಿಕೆ ವಸ್ತು ಪ್ರದರ್ಶನ ಮತ್ತು ರೈತ ಅಕ್ವೇರಿಯಂ ಗ್ಯಾಲರಿʼ ವೀಕ್ಷಿಸಿ ಮಾತನಾಡಿದ ಅವರು ಮೀನುಗಾರಿಕೆಯು ಒಳನಾಡು ಮೀನುಗಾರಿಕೆಗೂ ರಾಜ್ಯದಲ್ಲಿ ಅಪಾರ ಅವಕಾಶಗಳಿವೆ, ತಂತ್ರಜ್ಞಾನ ಆಧಾರಿತ ಮೀನು ಸಾಕಾಣಿಕೆ ಪದ್ಧತಿಗಳನ್ನು ರೈತರು ಅಳವಡಿಸಿಕೊಂಡರೆ ಕೃಷಿಯೊಂದಿಗೆ ಉತ್ತಮ ಲಾಭ ಗಳಿಸಲು ಸಾಧ್ಯ. ಇಂತಹ ವಸ್ತು ಪ್ರದರ್ಶನಗಳು ಕೃಷಿಕರು ಮತ್ತು ಸಾರ್ವಜನಿಕರಲ್ಲಿ ಹೊಸ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ವಿವಿಧ ತಳಿಯ ಅಲಂಕಾರಿಕ ಮತ್ತು ವಾಣಿಜ್ಯಿಕ ಮೀನುಗಳು, ಅಕ್ವೇರಿಯಂ ಮಾದರಿಗಳು ಹಾಗೂ ಮೀನುಗಾರಿಕೆಗೆ ಬಳಸುವ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳ ಕುರಿತು ಇಲಾಖೆಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಕೆ.ಎಸ್. ಬಸವಂತಪ್ಪ, ಕೃಷಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಅಬಕಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ.ತಿಮ್ಮಯ್ಯ ಅವರು ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಅಧಿಕಾರಿಗಳು ಇತರರಿದ್ದರು.





















