ದಾವಣಗೆರೆ: ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು, ಗರ್ಭಪಾತ ಹಾಗೂ ಮತ್ತೊಂದು ಶಸ್ತ್ರಚಿಕಿತ್ಸೆ ಬಳಿಕ ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಕೈದಾಳೆ ಗ್ರಾಮದ ತಿರುಮಲಾ (34) ಮೃತಪಟ್ಟ ಮಹಿಳೆ. ರಾಯಚೂರು ಜಿಲ್ಲೆ ಮೂಲದ ತಿರುಮಲಾ ಅವರಿಗೆ ಕೈದಾಳೆ ಗ್ರಾಮದ ದೀಕ್ಷಿತ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಕಳೆದ ಮೇ 22ರಂದು ತಿರುಮಲಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೂ ಅವರು ಮತ್ತೆ ಗರ್ಭಿಣಿಯಾಗಿದ್ದರು. ಬಳಿಕ ಪತಿ ದೀಕ್ಷಿತ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಗರ್ಭಧಾರಣೆಯ ಮುಂದುವರಿಕೆ ಹಾಗೂ ಗರ್ಭಪಾತದ ಕುರಿತು ವೈದ್ಯರು ಮತ್ತು ಕುಟುಂಬಸ್ಥರ ನಡುವೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ಕುಟುಂಬಸ್ಥರ ಮನವಿಯಂತೆ ಗರ್ಭಪಾತ ಮಾಡಿ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆಯ ಬಳಿಕ ತಿರುಮಲಾ ಅವರ ಆರೋಗ್ಯದಲ್ಲಿ ತೀವ್ರ ರಕ್ತಸ್ರಾವ ಸೇರಿದಂತೆ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿತ್ತು. ಭಾನುವಾರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ತಜ್ಞ ವೈದ್ಯರ ಸಮಿತಿ ರಚನೆ: ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಎಂ.ಬಿ. ನಾಗೇಂದ್ರಪ್ಪ, ತಿರುಮಲಾ ಅವರಿಗೆ ಮೇ 22ರಂದು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರು 12 ವಾರ 6 ದಿನಗಳ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಹಿಂದಿನ ಎರಡು ಹೆರಿಗೆಗಳೂ ಸಿಜೇರಿಯನ್ ಮೂಲಕ ನಡೆದಿದ್ದವು ಎಂದು ತಿಳಿಸಿದರು.
ಗರ್ಭಧಾರಣೆಯನ್ನು ಮುಂದುವರಿಸುವಂತೆ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ, ಕುಟುಂಬಸ್ಥರು ಗರ್ಭಪಾತ ಮಾಡಿಸಿ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸುವಂತೆ ಕೋರಿದ್ದರು. ಶಸ್ತ್ರಚಿಕಿತ್ಸೆ ವೇಳೆ ತೀವ್ರ ರಕ್ತಸ್ರಾವವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿತ್ತು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಐಸಿಯುಗೆ ಸ್ಥಳಾಂತರಿಸಲಾಗಿತ್ತು ಎಂದು ವಿವರಿಸಿದರು.
ಮಹಿಳೆಯ ಸಾವಿಗೆ ಇನ್ಫೆಕ್ಷನ್ ಸೇರಿದಂತೆ ಯಾವ ಕಾರಣವಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಿಖರ ಕಾರಣ ತಿಳಿಯಲು ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು. ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ವಿಫಲವಾದ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರ ನೀಡಲು ಅವಕಾಶವಿದೆ. ಈ ಶಸ್ತ್ರಚಿಕಿತ್ಸೆ ಕೆಲವೊಮ್ಮೆ ವಿಫಲವಾಗುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು.
ಕ್ರಮಕ್ಕೆ ಕುಟುಂಬಸ್ಥರ ಒತ್ತಾಯ: ಇತ್ತ, ತಿರುಮಲಾ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ಘಟನೆಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಡಾವಣೆ ಠಾಣೆ ಪೊಲೀಸರು ಮೃತ ಮಹಿಳೆಯ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ತಜ್ಞ ವೈದ್ಯರ ಸಮಿತಿಯ ವರದಿ ಬಳಿಕವಷ್ಟೇ ಸಾವಿನ ನಿಖರ ಕಾರಣ ಮತ್ತು ಚಿಕಿತ್ಸೆಯಲ್ಲಿ ಲೋಪವಾಗಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.






















