ದಾವಣಗೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ಪಕ್ಷದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ನೋವು ಕಾರ್ಯಕರ್ತರಲ್ಲಿರುವಂತೆ ಸಹಜವಾಗಿಯೇ ನನಗೂ ಇದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿ, ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮನವಿ ಮಾಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ನಿಗಮ-ಮಂಡಳಿಗಳ ನಿರ್ದೇಶಕ ಸ್ಥಾನಗಳಿವೆ. ಮೊದಲೇ ನೇಮಕಾತಿ ಮಾಡಿದ್ದರೆ, ಒಬ್ಬೊಬ್ಬರಿಗೆ ಒಂದು ವರ್ಷ ಅವಕಾಶ ನೀಡುವ ಮೂಲಕ ಒಂದು ಕ್ಷೇತ್ರದಲ್ಲಿ ಕನಿಷ್ಠ 15 ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬಹುದಾಗಿತ್ತು. ಇನ್ನು ಮುಂದಾದರೂ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಪಕ್ಷದ ಹೈಕಮಾಂಡ್ ಬಳಿ ಈ ಕುರಿತು ಮನವಿ ಮಾಡುತ್ತೇವೆ. ಯಾರಿಗಾದರೂ ಅವಕಾಶ ನೀಡಲಿ, ಆದರೆ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದ ಮೂಲಕ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಹೇಳಿದರು.
ಹಿರಿಯರ ಅನುಭವ ಅಲ್ಲಗಳೆಯಲಾಗದು: ಬೆಂಗಳೂರಿಗೆ ಬಂದ ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ತಮ್ಮ ಗುರುಗಳು ಮಾತನಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿರಿಯರು ತಮ್ಮ ಅನುಭವದಿಂದ ಮಾತನಾಡಿರಬಹುದು. ನನಗೆ ಅಂತಹ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಅದರ ಬಗ್ಗೆ ನಾನು ಹೇಗೆ ಹೇಳಲಿ? ಹಿರಿಯರ ಅನುಭವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮನೆಯಲ್ಲಿ ಟಿವಿಯಲ್ಲಿ ನೇರ ಪ್ರಸಾರ ನೋಡುತ್ತಿರುತ್ತಾರೆ. ಆಡುಭಾಷೆಯಲ್ಲಿ ಯಾರನ್ನಾದರೂ ಗುರಿಯಾಗಿಟ್ಟುಕೊಂಡು ಮಾತನಾಡಿರಬಹುದು. ಯಾರಾದರೂ ವಿಪಕ್ಷದವರು ಎರಡು ಮದುವೆಯಾಗಿರುವುದನ್ನು ನೋಡಿ ಅವರು ಆ ರೀತಿ ಹೇಳಿರಬಹುದು ಎಂದು ತಿಳಿಸಿದರು.
ಸಿಎಲ್‌ಪಿ ಸಭೆಯಲ್ಲಿ ಶಾಸಕರ ಸೋಲಿನ ಚರ್ಚೆಯಾಗಿಲ್ಲ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅರ್ಧದಷ್ಟು ಶಾಸಕರು ಸೋಲುತ್ತಾರೆ ಎಂಬ ಚರ್ಚೆ ನಡೆದಿದೆ ಎನ್ನುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಗಂಗಾ, ಸಿಎಲ್‌ಪಿ ಸಭೆಯಲ್ಲಿ ನಾನೂ ಇದ್ದೆ. ಇಡೀ ಸಭೆಯಲ್ಲಿ ಯಾವುದೇ ಶಾಸಕರು ಸೋಲುವ ಬಗ್ಗೆ ಚರ್ಚೆಯಾಗಿಲ್ಲ. ಯಾರೂ ಅದರ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವು ಶಾಸಕರಿಗೆ ಹಿನ್ನಡೆ ಇರಬಹುದು. ವಿರೋಧ ಸಹಜ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಡಿ.ಕೆ. ಶಿವಕುಮಾರ್ ಅವರೂ ಚುನಾವಣೆಯಲ್ಲಿ ಹಿಂದೆ ಸೋತಿದ್ದಾರೆ. ಸೋಲಿಲ್ಲದ ಸರದಾರರೆಂದು ಹೇಳಲಾಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಹಾಗೂ ಎಸ್. ಬಂಗಾರಪ್ಪ ಅವರೂ ಚುನಾವಣೆಯಲ್ಲಿ ಸೋತಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಪ್ರಕ್ರಿಯೆ ಎಂದರು.
2028ರ ವಿಧಾನಸಭಾ ಚುನಾವಣೆಗೆ ಶಾಸಕರು ಎಚ್ಚೆತ್ತು ಓಡಾಡುವಂತೆ ಸಿಎಲ್‌ಪಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸೋಲು-ಗೆಲುವು ಬೂತ್‌ಗಳು ತೆರೆದ ಬಳಿಕವಷ್ಟೇ ಗೊತ್ತಾಗುತ್ತದೆ ಎಂದು ಹೇಳಿದರು.
ಚುನಾವಣೆಗೆ ಕೋಟ್ಯಂತರ ರೂಪಾಯಿ ಹಣ ಬೇಕಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ವೆಚ್ಚ ಹೆಚ್ಚುತ್ತಿರುವುದು ಸಹಜ ಪ್ರಕ್ರಿಯೆಯಂತಾಗಿದೆ. ಎಷ್ಟು ಕೋಟಿ ಬೇಕು ಎಂಬ ನಿರ್ದಿಷ್ಟ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ. ಸೋಲುತ್ತೇನೆ ಎಂದು ಗೊತ್ತಿರುವವರು ನಾಮಪತ್ರ ಸಲ್ಲಿಸುತ್ತಾರೆಯೇ? ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೊಂದಿರುವವರೇ ನಾಮಪತ್ರ ಸಲ್ಲಿಸುತ್ತಾರೆ ಎಂದು ಹೇಳಿದರು.





















