SK Home Ad
Home ನಮ್ಮ ಜಿಲ್ಲೆ ಧಾರವಾಡ ಗಣೇಶ ವಿಸರ್ಜನೆ ವೇಳೆ ಅಶ್ಲೀಲ ನೃತ್ಯ ಆರೋಪ: ಕಲಾವಿದೆ ಸೇರಿ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

ಗಣೇಶ ವಿಸರ್ಜನೆ ವೇಳೆ ಅಶ್ಲೀಲ ನೃತ್ಯ ಆರೋಪ: ಕಲಾವಿದೆ ಸೇರಿ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

0
105

ಹುಬ್ಬಳ್ಳಿ: ನವನಗರದಲ್ಲಿ ನಡೆದ 21ನೇ ದಿನದ ಸನಾತನ ಮಹಾರಾಜ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅಶ್ಲೀಲ ನೃತ್ಯ ಪ್ರದರ್ಶಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಲಾಗಿದೆ ಎಂದು ಆರೋಪಿಸಿ, ಕಲಾವಿದೆ ನಿಶಾ ಮುಂಬೈಕರ್ ಸೇರಿದಂತೆ ಕಾರ್ಯಕ್ರಮದ ಮುಖ್ಯ ಸಂಘಟಕರು ಹಾಗೂ ನಿರ್ವಹಣಾ ತಂಡದ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ವಕೀಲರೊಬ್ಬರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ನವನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲಾವಿದೆ ನಿಶಾ ಮುಂಬೈಕರ್ ಅವರು ಅಶ್ಲೀಲ ನೃತ್ಯ ಪ್ರದರ್ಶಿಸಿ, ಸಾರ್ವಜನಿಕವಾಗಿ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ. ಇದರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳು, ಹಿರಿಯ ನಾಗರಿಕರು ಹಾಗೂ ಭಕ್ತರಿಗೆ ತೀವ್ರ ಕಿರಿಕಿರಿ ಮತ್ತು ಮಾನಸಿಕ ಯಾತನೆ ಉಂಟಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ನಡೆಸಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿಶಾ ಮುಂಬೈಕರ್, ಮುಖ್ಯ ಸಂಘಟಕರು ಹಾಗೂ ಕಾರ್ಯಕ್ರಮ ನಿರ್ವಹಣಾ ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಒತ್ತಾಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದವರ ಹೇಳಿಕೆ, ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.