ಬೆಂಗಳೂರು: ‘ಬಿಗ್ ಬಾಸ್’ ಎಂದರೆ ಕೇವಲ ಜಗಳ, ಸವಾಲುಗಳಷ್ಟೇ ಅಲ್ಲ, ಮನರಂಜನೆಯ ಗಣಿಯೂ ಹೌದು. ಅದರಲ್ಲೂ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳ ಕಾಲೆಳೆಯುವ ದೃಶ್ಯಗಳು ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತವೆ. ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲೂ ಇಂತಹುದೇ ಒಂದು ತಮಾಷೆಯ ಸನ್ನಿವೇಶ ನಡೆದಿದ್ದು, ‘ಜಗ್ಗ ಮಮ್ಮಿ’ ಎಂದೇ ಖ್ಯಾತಿ ಪಡೆದಿರುವ ಲಾಯರ್ ಜಗದೀಶ್ ಅವರ ಹೊಸ ‘ಸೋನಿಕಾ’ ಜಪ ಎಲ್ಲರ ಗಮನ ಸೆಳೆದಿದೆ.
ಸಂಚಿಕೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತು ಮಾತನಾಡಿದ ಸುದೀಪ್, “ಜಗ್ಗಿ, ಬಂದವರಲ್ಲಿ ನಿಮಗೆ ಯಾರು ತುಂಬಾ ಕ್ಲೋಸ್ ಆದ್ರು?” ಎಂದು ಪ್ರಶ್ನಿಸಿದರು. ಅದಕ್ಕೆ ಮುಖದಲ್ಲಿ ನಾಚಿಕೆ ತುಂಬಿಕೊಂಡು ಉತ್ತರಿಸಿದ ಜಗದೀಶ್, “ನನಗೆ ಸೋನಿಕಾ ಸರ್. ತುಂಬಾ ಮುದ್ದಾಗಿದ್ದಾರೆ, ಅವರ ಎಂಟ್ರಿ ನೋಡಿದಾಗಿನಿಂದ ಅವರಂದ್ರೆ ನನಗೆ ತುಂಬಾ ಇಷ್ಟ” ಎಂದರು. ಜಗದೀಶ್ ಈ ದಿಢೀರ್ ಬದಲಾವಣೆ ಕಂಡು ಕಿಚ್ಚ, “ಅವರಲ್ಲಿ ಏನ್ ಗುಣ ಇಷ್ಟ ಆಯ್ತು?” ಎಂದು ಕೆದಕಿದರು. ಅದಕ್ಕೆ ಜಗದೀಶ್, “ಅವರ ಗುಣಕ್ಕಿಂತ ಅವರೇ ನನಗೆ ಇಷ್ಟ” ಎಂದು ಹೇಳಿದ್ದು ಮನೆಯವರನ್ನು ಅಚ್ಚರಿಗೊಳಿಸಿತು.
ಕೂಡಲೇ ಜಗದೀಶ್ ಹಳೆಯ ಸನ್ನಿವೇಶ ನೆನಪಿಸಿದ ಸುದೀಪ್, “ಮೊದಲೆಲ್ಲಾ ಮನೆ, ಕಷ್ಟ, ಮಗು, ಅಮ್ಮ ಅಂತ ಅಳ್ತಿದ್ರಿ. ಅದೆಲ್ಲಾ ಎಲ್ಲಿ ಹೋಯ್ತು? ಈಗ ಬರೀ ಸೋನಿಕಾ ಜಪನಾ?” ಎಂದು ತಮಾಷೆಯಾಗಿ ಪಂಚ್ ನೀಡಿದರು. ಈ ಕೌಂಟರ್‌ಗೆ ಉತ್ತರ ತಿಳಿಯದೆ ಜಗದೀಶ್ ನಗುತ್ತಾ ನಿಂತರೆ, ಸೋನಿಕಾ “ಪಾಪ, ಇವರು ಎಷ್ಟು ಇನ್ನೋಸೆಂಟ್” ಎಂದು ಪ್ರತಿಕ್ರಿಯಿಸಿದರು.






















