SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್‌ನಲ್ಲಿ ರೊಚ್ಚಿಗೆದ್ದ ಕಿಚ್ಚ: ಸ್ಪರ್ಧಿಗಳ ಕಿರಿಕ್‌ಗೆ ಬೇಸತ್ತು ವೇದಿಕೆಯಿಂದ ಹೊರನಡೆದ ಸುದೀಪ್!

ಬಿಗ್ ಬಾಸ್‌ನಲ್ಲಿ ರೊಚ್ಚಿಗೆದ್ದ ಕಿಚ್ಚ: ಸ್ಪರ್ಧಿಗಳ ಕಿರಿಕ್‌ಗೆ ಬೇಸತ್ತು ವೇದಿಕೆಯಿಂದ ಹೊರನಡೆದ ಸುದೀಪ್!

0
9

Bangalore: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಈ ವಾರದ ‘ಕಿಚ್ಚನ ಪಂಚಾಯ್ತಿಯಲ್ಲಿ’ ಪ್ರೇಕ್ಷಕರಿಗೆ ತೀವ್ರ ಕುತೂಹಲ ಹಾಗೂ ದಿಗ್ಭ್ರಮೆ ಕಾದಿದೆ. ವಾರಪೂರ್ತಿ ಸ್ಪರ್ಧಿಗಳು ಮಾಡಿದ ಎಡವಟ್ಟುಗಳು, ಅನಗತ್ಯ ಗಲಾಟೆ ಹಾಗೂ ಉಸ್ತುವಾರಿಗಳ ಜವಾಬ್ದಾರಿರಹಿತ ಆಟದಿಂದಾಗಿ ಖುದ್ದು ನಿರೂಪಕ ಕಿಚ್ಚ ಸುದೀಪ್ ತೀವ್ರ ಬೇಸರಗೊಂಡು, ಚರ್ಚೆಯ ಮಧ್ಯದಲ್ಲೇ ವೇದಿಕೆಯಿಂದ ಹೊರನಡೆದ ಘಟನೆ ನಡೆದಿದೆ.

ಈ ವಾರದ ಆಟದಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ಉಸ್ತುವಾರಿಗಳಾಗಿದ್ದ ಮಂಜು ಹಾಗೂ ಲಿಖಿತ್ ತಪ್ಪು ನಿರ್ಣಯ ಮತ್ತು ಗೊಂದಲಮಯ ಲೆಕ್ಕಾಚಾರದಿಂದಾಗಿ ಇಡೀ ಕ್ಯಾಪ್ಟೆನ್ಸಿ ಓಟವೇ ರದ್ದಾಗಿತ್ತು. ಕಷ್ಟಪಟ್ಟು ಆಡಿದ ಇತರ ಸ್ಪರ್ಧಿಗಳ ಶ್ರಮ ವ್ಯರ್ಥವಾದ ಹಿನ್ನೆಲೆಯಲ್ಲಿ ಕಿಚ್ಚನ ಅಖಾಡದಲ್ಲಿ ಉಸ್ತುವಾರಿಗಳಿಗೆ ಸಖತ್ ಕ್ಲಾಸ್ ಸಿಕ್ಕಿದೆ. ಇದಲ್ಲದೆ, ವೈಲ್ಡ್ ಕಾರ್ಡ್ ಎಂಟ್ರಿ ಹಾಗೂ ಸೀಕ್ರೆಟ್ ರೂಮ್‌ನಿಂದ ಮತ್ತೆ ಮನೆಗೆ ಬಂದಿರುವ ತಾಂಡವ್ ರಾಮ್ ಅವರ ರೀ-ಎಂಟ್ರಿಯಿಂದ ಮನೆಯ ಗೇಮ್ ಪ್ಲಾನ್ ಬದಲಾಗಿರುವ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದಿವೆ.

ಇನ್ನೊಂದೆಡೆ… ಗ್ರೂಪ್ ಟಾಸ್ಕ್‌ನಲ್ಲಿ ಗೆದ್ದರೂ ತಂಡದಲ್ಲಿದ್ದ ಭಿನ್ನಾಭಿಪ್ರಾಯಗಳಿಂದ ಕೆಟ್ಟವರಾಗಬೇಕಾಗಿ ಬಂದ ಗಾನವಿ ಪರಿಸ್ಥಿತಿ, ಅನಗತ್ಯ ಕೂಗಾಟ ಹಾಗೂ ಕಳಪೆ ಪಟ್ಟದ ಕುರಿತಾಗಿ ಪಂಚಾಯ್ತಿಯಲ್ಲಿ ಬಿಸಿಬಿಸಿ ಚರ್ಚೆಯಾಗಿದೆ. ಹಾಗೆಯೇ, ಆಟದ ಕಡೆ ಗಮನಕೊಡದೆ ಹೆಣ್ಣುಮಕ್ಕಳ ಗುಂಪಿನಲ್ಲೇ ಕಾಲ ಕಳೆಯುತ್ತಿರುವ ಯಶಸ್ ಆಟದ ವೈಖರಿಗೂ ಸುದೀಪ್ ಚಾಟಿ ಬೀಸಿದ್ದಾರೆ. ಹೀಗೆ ಒಂದರ ಮೇಲೊಂದರಂತೆ ಮನೆಯಲ್ಲಿ ನಡೆದ ಅತಿಯಾದ ಕಿರಿಕ್ ಹಾಗೂ ಸ್ಪರ್ಧಿಗಳ ಅತಿರೇಕದ ನಡವಳಿಕೆಯಿಂದ ಸಹನೆ ಕಳೆದುಕೊಂಡ ಸುದೀಪ್, ನಿರೂಪಣೆಯನ್ನು ಅರ್ಧಕ್ಕೇ ನಿಲ್ಲಿಸಿ ಸ್ಟೇಜ್ ಬಿಟ್ಟು ತೆರಳಿದ್ದಾರೆ.