ದಾವಣಗೆರೆ: ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಹಸುಗೂಸನ್ನು ಎತ್ತಿಕೊಂಡು ಪತಿ ಪರಾರಿಯಾಗಿದ್ದು, ಪತ್ನಿಯ ಶವವು ಕಳೆದ ಮೂರು ದಿನಗಳಿಂದ ನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮೃತಳ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ದಾವಣಗೆರೆ ಇಂದಿರಾ ನಗರದ ನಿವಾಸಿ ಬಸಮ್ಮ (27) ಮೃತ ಮಹಿಳೆ. ತಾಲೂಕಿನ ಬೇತೂರು ಗ್ರಾಮದ ನಿಂಗರಾಜ ಎಂಬಾತನನ್ನು 5 ವರ್ಷಗಳ ಹಿಂದೆ ಮೃತ ಬಸಮ್ಮ ಪ್ರೀತಿಸಿದ್ದು, ಅಂತರ್ಜಾತಿಯಾಗಿದ್ದರೂ ಬಸಮ್ಮನ ಕುಟುಂಬಸ್ಥರು ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು.
ನಿಂಗರಾಜ, ಬಸಮ್ಮ ದಂಪತಿಗೆ 3 ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಮದುವೆಯಾದ ಆರಂಭದ 3 ವರ್ಷ ಸಂತೋಷದಿಂದಲೇ ಇಬ್ಬರೂ ಇದ್ದರು. 2 ವರ್ಷದಿಂದ ನಿಂಗರಾಜ ದುಶ್ಚಟಕ್ಕೆ ದಾಸನಾಗಿದ್ದ. ಆಟೋ ಚಾಲನೆ ಮಾಡುತ್ತಿದ್ದ ಲಿಂಗರಾಜ ದುಶ್ಟಟದಿಂದಾಗಿ ತವರು ಮನೆಯಿಂದ ದುಡ್ಡು ತರುವಂತೆ ನಿತ್ಯವೂ ಬಸಮ್ಮನಿಗೆ ಪೀಡಿಸುತ್ತಿದ್ದ. ಮಗಳ ಬಾಳು ಚೆನ್ನಾಗಿದ್ದರೆ ಸಾಕೆಂದು ಬಸಮ್ಮನ ತಂದೆ, ತಾಯಿ ತಮ್ಮ ಮನೆ ಅಡ ಇಟ್ಟು, ಹಣ ಕೊಡಿಸಿದ್ದರಂತೆ.
ಹಣ ತಂದರೂ ಪತ್ನಿ ಬಸಮ್ಮನ ಮೇಲೆ ನಿಂಗರಾಜ ಕ್ರೌರ್ಯ ಮೆರೆಯುತ್ತಿದ್ದಂತೆ. ತಲೆ ನೋವಿನಂದ ಬಳಲುತ್ತಿದ್ದ ಬಸಮ್ಮ 2ನೇ ಸಲ ಗರ್ಭಿಣಿಯಾಗಿದ್ದರೂ ಮತ್ತೆ ಮಾರಣಾಂತಿಕ ಹಲ್ಲೆ ಮಾಡಿದ್ದ ಎಂದು ಮೃತಳ ಕುಟುಂಬಸ್ಥರು ದೂರಿದ್ದಾರೆ.
ಗಂಭೀರ ಹಲ್ಲೆಗೊಳಗಾಗಿದ್ದ ಬಸಮ್ಮಳಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಸಮ್ಮಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಸೆ. 24ರಂದು ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು, ಸೆ. 28ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಬಳಿಕ ಮೃತದೇಹವನ್ನು ಅಂಬ್ಯುಲೆನ್ಸ್ನಲ್ಲಿ ದಾವಣಗೆರೆಗೆ ತಂದ ಪತಿ ನಿಂಗರಾಜ ಬಸಮ್ಮನ ತಾಯಿ ಜೊತೆಗೆ ಪಾರ್ಥೀವ ಶರೀರವನ್ನು ಬಸಮ್ಮನ ತವರು ಮನೆಗೆ ಕಳಿಸಿದ್ದಾರೆ. ಆಸ್ಪತ್ರೆ ದಾಖಲಾತಿ ಸಮೇತ ನಿಂಗರಾಜ ಹಸುಗೂಸಿನ ಸಮೇತ ನಾಪತ್ತೆಯಾಗಿದ್ದಾನೆ. ಇಂದಿರಾ ನಗರದ ತಮ್ಮ ಮನೆಯ ಮುಂದೆ ಮೃತಳ ಹೆತ್ತವರು, ಅಣ್ಣ ಸೇರಿದಂತೆ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಮೃತಳ ಶವವನ್ನು ಮನೆ ಮುಂದೆ ಇಟ್ಟುಕೊಂಡ ಕುಟುಂಬಸ್ಥರು ನ್ಯಾಯಕ್ಕಾಗಿ ಪರದಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಪೊಲೀಸರು ಅಲೆದಾಡಿಸಿದ್ದಾರೆ.
ಮೃತಳ ಸಹೋದರಿ ಮಂಜಮ್ಮ ಮಂಗಳವಾರ ರಾತ್ರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮೃತ ಬಸಮ್ಮನ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತ ಬಸಮ್ಮನ ಅಣ್ಣ ಮಂಜುನಾಥ, ಸಹೋದರಿ ಮಂಜಮ್ಮ ಮಾತನಾಡಿ, ಪಾಪಿ ನಿಂಗರಾಜ ಹಿಂದೆ ಚೆನ್ನಾಗಿಯೇ ಇದ್ದ. ನಾವೇ ಮುಂದೆ ನಿಂತು ಮದುವೆ ಮಾಡಿದ್ದೆವು. 2 ವರ್ಷದಿಂದ ಬಸಮ್ಮನ ಮೇಲೆ ಕ್ರೌರ್ಯ ಮೆರೆಯಲಾರಂಭಿಸಿದ. ನನ್ನ ತಂಗಿ ಬಸಮ್ಮ ಇದನ್ನೆಲ್ಲಾ ನಮಗೆ ತಿಳಿಸಿದ್ದರೆ. ಆಕೆ ಬದುಕುತ್ತಿದ್ದಳು. ತುಂಬು ಗರ್ಭಿಣಿಯಾಗಿದ್ದ ಆಕೆ ಮೇಲೆ ನಿಂಗರಾಜನು ಹಲ್ಲೆ ಮಾಡಿದ್ದರಿಂದಲೇ ಬಸಮ್ಮ ಮೃತಪಟ್ಟಿದ್ದಾಳೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಣ್ಣೀರಿಡುತ್ತಾ ಒತ್ತಾಯಿಸಿದರು.
ಮೃತ ಬಸಮ್ಮನ ಮಕ್ಕಳನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕುಟುಂಬಸ್ಥರು ಬಸಮ್ಮನ ಹೆತ್ತವರು ಮೊಮ್ಮಕ್ಕಳಿಗಾಗಿ ಒತ್ತಾಯಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿಂಗರಾಜ ಹಾಗೂ ನವಜಾತ ಶಿಶುವಿಗಾಗಿ ಹುಡುಕಾಟ ನಡೆಸಿದ್ದಾರೆನ್ನಲಾಗಿದೆ.





















