ಗದಗ: ಕಳೆದ 18 ದಿನಗಳಿಂದ ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL)ದ ಗದಗ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಪರ್ವೇಜ್ ಧಾರವಾಡ ಅವರ ಪತ್ತೆ ಕಾರ್ಯಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಗದಗದಿಂದ 1,200 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಪರ್ವೇಜ್ ಅವರನ್ನು ಹೋಲುವ ವ್ಯಕ್ತಿಯ ಚಲನವಲನ ಪತ್ತೆಯಾಗಿರುವುದು ತನಿಖೆಗೆ ಹೊಸ ಸುಳಿವು ನೀಡಿದೆ.
ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಇಲಾಖೆಯ ಸಭೆಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಪರ್ವೇಜ್ ಬಳಿಕ ನಾಪತ್ತೆಯಾಗಿದ್ದರು. ಬೆಂಗಳೂರಿಗೆ ತಲುಪಿದ್ದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ತನಿಖೆಯಲ್ಲಿ ಅವರ ಕೊನೆಯ ಮೊಬೈಲ್ ಲೊಕೇಶನ್ ವಿಜಯವಾಡದತ್ತ ಪತ್ತೆಯಾಗಿತ್ತು ಎಂದು ಪೊಲೀಸರು ಈ ಹಿಂದೆ ಮಾಹಿತಿ ನೀಡಿದ್ದರು. ಬಳಿಕ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಸ್ಥಳ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.
ಮೊಬೈಲ್ ಸಂಪರ್ಕದ ಸುಳಿವು ಕೈಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಮಾರ್ಗಗಳಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಾ ಬಂದಿದ್ದಾರೆ. ನೂರಾರು ದೃಶ್ಯಗಳನ್ನು ಜಾಲಾಡಿದ ಬಳಿಕ ಭೋಪಾಲ್ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿಯಲ್ಲಿ ಪರ್ವೇಜ್ ಅವರನ್ನು ಹೋಲುವ ವ್ಯಕ್ತಿಯ ಓಡಾಟ ಕಂಡುಬಂದಿರುವುದು ಇದೀಗ ತನಿಖೆಗೆ ಪ್ರಮುಖ ಸುಳಿವಾಗಿದೆ.
ಈ ಹಿನ್ನೆಲೆಯಲ್ಲಿ ಭೋಪಾಲ್‌ನಲ್ಲಿ ಅವರ ಚಲನವಲನದ ಜಾಡು ಹಿಡಿಯಲು ಪೊಲೀಸ್ ತಂಡಗಳು ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿವೆ. ಈ ಹಿಂದೆ ಪರ್ವೇಜ್ ಪತ್ತೆಗಾಗಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಸಿಡಿಆರ್, ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಲಭ್ಯವಿರುವ ವಿವಿಧ ಮಾಹಿತಿಗಳನ್ನೂ ಪರಿಶೀಲಿಸಲಾಗುತ್ತಿದೆ.
ಪರ್ವೇಜ್ ನಾಪತ್ತೆಯಾಗುವ ಮುನ್ನ ಇಲಾಖೆಯ ಅನುದಾನ ಹಾಗೂ ಕಾಮಗಾರಿಗಳ ಬಾಕಿ ಪಾವತಿಗೆ ಸಂಬಂಧಿಸಿದ ಒತ್ತಡದ ಕುರಿತು ಪತ್ರ ಬರೆದಿದ್ದರು ಎಂಬುದು ವರದಿಯಾಗಿತ್ತು. ಆದರೆ ಅವರು ಎಲ್ಲಿದ್ದಾರೆ ಮತ್ತು ಅವರ ಪ್ರಸ್ತುತ ಸ್ಥಿತಿ ಏನು ಎಂಬುದನ್ನು ಪೊಲೀಸರು ಅಧಿಕೃತವಾಗಿ ಖಚಿತಪಡಿಸಬೇಕಿದೆ.
ಭೋಪಾಲ್ ಸಿಸಿಟಿವಿ ಸುಳಿವಿನ ಆಧಾರದಲ್ಲಿ ಶೋಧ ಮುಂದುವರಿದಿದ್ದು, ಪರ್ವೇಜ್ ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















